ರೇಣುಕಾಸ್ವಾಮಿ ಕೊಲೆ ಪ್ರಕರಣ | ಮೂವರು ಆರೋಪಿಗಳನ್ನು ದರ್ಶನ್ ಮನೆಗೆ ಕರೆದೊಯ್ದು ಮಹಜರು

Update: 2024-06-18 15:45 GMT

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9ನೆ ಆರೋಪಿಯಾಗಿರುವ ಆರ್.ಆರ್.ನಗರದ ನಿವಾಸಿ ಧನರಾಜ್, ಎ-3 ಪವನ್ ಸೇರಿದಂತೆ ಮೂವರು ಆರೋಪಿಗಳನ್ನು ದರ್ಶನ್ ಅವರ ಮನೆಗೆ ಮಂಗಳವಾರ ಪೊಲೀಸರು ಕರೆದೊಯ್ದು ಒಂದು ಗಂಟೆಗಳ ಕಾಲ ಮಹಜರು ನಡೆಸಿದ್ದಾರೆ.

ಧನರಾಜ್ ಸೇರಿದಂತೆ ಆರೋಪಿಗಳು ಕೃತ್ಯದ ದಿನ ಬಳಸಿದ್ದ ಮೂರು ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಳಿಕ ಧನರಾಜ್‍ನನ್ನು ಪಟ್ಟಣಗೆರೆಯ ಶೆಡ್‍ಗೆ ಕರೆದೊಯ್ದು ಮಹಜರಿಗೆ ಒಳಪಡಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಪವಿತ್ರಾ ಗೌಡ ಅಸ್ವಸ್ಥ: ಕೊಲೆ ಪ್ರಕರಣದ ಎ.1 ಆರೋಪಿ ಪವಿತ್ರಾ ಗೌಡ ಮಂಗಳವಾರ ವಿಚಾರಣೆ ವೇಳೆ ಅಸ್ವಸ್ಥರಾಗಿದ್ದು, ಪೊಲೀಸರು ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಗಾಗಿದ್ದ ಪವಿತ್ರಾರ ಆರೋಗ್ಯ ಹದಗೆಟ್ಟ ಹಿನ್ನೆಲೆ, ವೈದ್ಯರನ್ನು ಠಾಣೆಗೆ ಕರೆಸಿಕೊಂಡು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಚೇತರಿಕೆ ಕಾಣದ ಹಾಗೂ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಮಲ್ಲತ್ತಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೊಲೀಸರು ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಟೋನಿ ಬ್ರೂಕ್ ಪಬ್‍ನಲ್ಲಿ ನಟ ಚಿಕ್ಕಣ್ಣ, ಆರೋಪಿ ದರ್ಶನ್ ಮತ್ತು ಸಹಚರರಿಂದ ಮಹಜರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿಗೆ ಸ್ಟೋನಿ ಬ್ರೂಕ್ ಪಬ್‍ನಲ್ಲಿ ಜೂ.8ರಂದು ಆರೋಪಿಗಳು ಪಾರ್ಟಿ ಮಾಡಿದ್ದ ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿದಂತೆ ಕೆಲ ಆರೋಪಿಗಳನ್ನು ಸ್ಟೋನಿ ಬ್ರೂಕ್ ಪಬ್‍ಗೆ ಕರೆದೊಯ್ದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

ಸ್ಟೋನಿ ಬ್ರೂಕ್ ಪಬ್‍ನಲ್ಲಿ ನಡೆದ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಇದ್ದರು ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಚಿಕ್ಕಣ್ಣಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಸೋಮವಾರ ಆರೋಪಿಗಳ ಜೊತೆಗೆ ಚಿಕ್ಕಣ್ಣರನ್ನು ಸ್ಟೋನಿ ಬ್ರೂಕ್ ಪಬ್‍ಗೆ ಕರೆದೊಯ್ದು ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಸ್ಥಳ ಮಹಜರು ವೇಳೆ ಪೊಲೀಸರು ಚಿಕ್ಕಣ್ಣಗೆ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News