ರೇಣುಕಾಸ್ವಾಮಿ ಕೊಲೆ ಪ್ರಕರಣ | ಸಾಕ್ಷಿದಾರರಿಗೆ ಬೆದರಿಕೆ : ತನಿಖೆಯಲ್ಲಿ ಬಹಿರಂಗ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಹತ್ಯೆಯನ್ನು ಮರೆಮಾಚಲು ಆರೋಪಿಗಳು ಸಾಕ್ಷಿದಾರರಿಗೆ ಬೆದರಿಕೆ ಹಾಕಿರುವುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ವರದಿಯಾಗಿದೆ.
ಜೂ.8ರಂದು ನಗರದ ಪಟ್ಟಣಗೆರೆಯ ಶೆಡ್‍ನಲ್ಲಿ ರೇಣುಕಾಸ್ವಾಮಿಯನ್ನು ಆರೋಪಿಗಳು ಅಮಾನುಷವಾಗಿ ಹಲ್ಲೆ ಮಾಡಿ ಹತ್ಯೆಗೈದಿರುವ ಬಗ್ಗೆ, ಮೃತನು ಧರಿಸಿದ್ದ ಬಟ್ಟೆ ಕಳಚಿ ಅದನ್ನು ಬೇರೆಡೆ ಬಿಸಾಕುವಂತೆ ಮಾಡಿದ್ದರು. ಬಳಿಕ ಕೃತ್ಯದ ಬಗ್ಗೆ ಹೇಳದಂತೆ ಬಂಧಿತ ಆರೋಪಿಗಳು ಬೆದರಿಕೆ ಹಾಕಿರುವ ಬಗ್ಗೆ ತನಿಖೆಯಲ್ಲಿ ಗೊತ್ತಾಗಿರುವುದಾಗಿ ಮೂಲಗಳು ತಿಳಿಸಿವೆ.
ಹತ್ಯೆ ಬಳಿಕ ಮೃತನ ಬಟ್ಟೆಯನ್ನು ಬದಲಾಯಿಸಿದ ಆರೋಪಿಗಳು ಹಾಗೂ ಕೆಲವರು ಬೇರೆಡೆ ಎಸೆದು ಸಾಕ್ಷ್ಯ ನಾಶಪಡಿಸಿದ್ದರು. ಮೃತನು ಧರಿಸಿದ್ದ ಪ್ಯಾಂಟ್ ಎಸೆದಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡು ಸಾಕ್ಷಿದಾರನಾಗಿ ಮಾಡಲಾಗಿದೆ. ಪ್ರಕರಣದಲ್ಲಿ ಕೆಲ ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಅವರಿಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದು ಸುರಕ್ಷಿತೆ ದೃಷ್ಟಿಯಿಂದ ಅವರ ಹೆಸರನ್ನು ಗೋಪ್ಯತೆ ಕಾಪಾಡಿರುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ರಿಮ್ಯಾಂಡ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಕೆಲ ಸಾಕ್ಷಿದಾರರನ್ನು ಸಿಆರ್‌ಪಿಸಿ 164ರಡಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದರ್ಶನ್ ಮೊಬೈಲ್ ಡೇಟಾ ರೀ-ಆಕ್ಸಿಸ್‍ಗೆ ಮುಂದಾದ ಪೊಲೀಸರು..!
ಪ್ರಕರಣದಲ್ಲಿ ತಮ್ಮ ಹೆಸರು ಬರದಂತೆ ವ್ಯಕ್ತಿಯೊಬ್ಬನಿಂದ 40 ಲಕ್ಷ ರೂ. ಸಾಲ ಪಡೆದಿರುವ ಬಗ್ಗೆ ತನಿಖೆಯಲ್ಲಿ ಬಯಲಾಗಿತ್ತು. ಹಣದ ಮೂಲ ಪತ್ತೆ ಹಚ್ಚಲು ಎರಡು ದಿನಗಳ ಕಾಲ ಮೂರನೇ ಬಾರಿ ಪೊಲೀಸ್ ಕಸ್ಟಡಿ ಪಡೆದಿದ್ದ ಪೊಲೀಸರು, ದರ್ಶನ್ ಮೊಬೈಲ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಡೇಟಾ ನಿಷ್ಕ್ರಿಯಗೊಳಿಸಿದ್ದು, ನ್ಯಾಯಾಲಯದ ಅನುಮತಿ ಪಡೆದು ಮತ್ತೆ ರೀ-ಆಕ್ಸಿಸ್ ಮಾಡಲು ಮುಂದಾಗಿದ್ದಾರೆ. ಮೃತ ರೇಣುಕಾಸ್ವಾಮಿಯ ಮೊಬೈಲ್ ಅನ್ನು ಆರೋಪಿಗಳು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಸುಮನಹಳ್ಳಿಯ ರಾಜಕಾಲುವೆಗೆ ಎಸೆದಿದ್ದು, ಆತನ ಮೊಬೈಲ್ ಡೇಟಾವನ್ನು ನಿಷ್ಕ್ರಿಯಗೊಳಿಸಿದ್ದು, ಮೃತನ ಹೆಸರಿನಲ್ಲಿ ಮತ್ತೆ ಸಿಮ್ ಕಾರ್ಡ್ ಸರ್ವೀಸ್ ಪ್ರೊವೈಡರ್ ಗಳಿಂದ ಖರೀದಿಸಿ ಪರಿಶೀಲಿಸಬೇಕಿದೆ ಎಂದು ಪೊಲೀಸರು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.