ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ನಿವಾರಣೆಗೆ 556 ಕೋಟಿ ರೂ.ಮೀಸಲು: ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-03-04 15:17 GMT

ಬೆಂಗಳೂರು: ನಗರದ ಎಲ್ಲ ಶಾಸಕರಿಗೆ ನೀರಿನ ಸಮಸ್ಯೆ ಬಗೆಹರಿಸಲು ತಲಾ 10ಕೋಟಿ ರೂ. ಅನುದಾನ ನೀಡಲಾಗಿದೆ. ಬಿಬಿಎಂಪಿಗೆ 148 ಕೋಟಿ ರೂ., ಬಿಡಬ್ಲ್ಯೂಎಸ್‍ಎಸ್‍ಬಿ ಯಿಂದ 128 ಕೋಟಿ ಒಟ್ಟು 556 ಕೋಟಿ ರೂ. ಹಣವನ್ನು ಕುಡಿಯುವ ನೀರಿನ ಪೂರೈಕೆಗೆ ಮೀಸಲಿಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ಬಿಬಿಎಂಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಿನ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಸಹಾಯವಾಣಿ ಮತ್ತು ವಾರ್ಡ್‍ವಾರು ದೂರು ಕೇಂದ್ರಗಳನ್ನು ತೆರೆಯಲಾಗುವುದು. ಸಮಸ್ಯೆ ಆಲಿಸಲು ವಾರ್ ರೂಂಗಳು ಕೆಲಸ ನಿರ್ವಹಿಸಲಿವೆ ಎಂದರು.

ನಾಗರಿಕರು ಅನಗತ್ಯವಾಗಿ ನೀರನ್ನು ಬಳಕೆ ಮಾಡಬಾರದು. ಉದ್ಯಾನಗಳಿಗೆ, ಇತರೇ ಬಳಕೆಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುವುದು. ಬೀಕರ ಬರಗಾಲದಲ್ಲಿ ನೀರಿನ ಮಿತ ಬಳಕೆ ಮಾಡಬೇಕು. ಕುಡಿಯುವ ನೀರನ್ನು ಪೂರೈಕೆ ಮಾಡುವುದು ಸರಕಾರದ ಜವಾಬ್ದಾರಿಯಾಗಿದ್ದು, ನಗರದ ಜನತೆ ಗಾಬರಿಯಾಗುವುದು ಬೇಡ. ಪ್ರತಿಯೊಬ್ಬರಿಗೂ ನೀರು ನೀಡುವುದು ನಮ್ಮ ಕರ್ತವ್ಯ ಎಂದು ಭರವಸೆ ನೀಡಿದರು.

ಹಾಲಿನ ಟ್ಯಾಂಕರ್ ಬಳಕೆ: ನಿರುಪಯುಕ್ತ ಹಾಲಿನ ಟ್ಯಾಂಕರ್‍ಗಳನ್ನು ನೀರು ಸರಬರಾಜಿಗೆ ಬಳಕೆ ಮಾಡಲು ಸೂಚಿಸಲಾಗಿದೆ. ಕೆಎಂಎಫ್ ವ್ಯಾಪ್ತಿಯ ಎಲ್ಲ ಘಟಕಗಳಿಂದ ಟ್ಯಾಂಕರ್ ಗಳನ್ನು ತರಿಸಿ ಸ್ವಚ್ಚಗೊಳಿಸಿ ಬಳಸಬೇಕು ಎಂದು ತಿಳಿಸಲಾಗಿದೆ. ಈ ಟ್ಯಾಂಕರ್ ಗಳನ್ನು ನೀರಿನ ಸಮಸ್ಯೆ ಬಗೆಹರಿಯುವ ತನಕ ಬಳಸಬೇಕು ಎಂದು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಮಾ.7ರಂದು ದರ ನಿಗದಿ: ಟ್ಯಾಂಕರ್ ನೀರು ಪೂರೈಕೆಗೆ ರೂ.500ರಿಂದ 2 ಸಾವಿರ ರೂ.ವರೆಗೂ ವಸೂಲಿ ಮಾಡುತ್ತಿದ್ದಾರೆ. ಈ ಗೊಂದಲವನ್ನು ಅಸೋಸಿಯೇಷನ್ ಬಳಿ ಮಾತನಾಡಿ‌, ನೀರಿನ ದರವನ್ನು ಕಿ.ಮೀಗೆ ಇಂತಿಷ್ಟು ಎಂದು ನಿಗದಿ ಮಾಡಲಾಗುವುದು. ಟ್ಯಾಂಕರ್ ನೀರು ಪೂರೈಕೆ ಮಾಲಕರ ಸಭೆಯನ್ನು ಮಾ.7ರಂದು ನಡೆಸಿ, ಅಂದು ದರ ನಿಗದಿ ಪಡಿಸಲಾಗುತ್ತದೆ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದಲ್ಲಿ 15 ಸಾವಿರಕ್ಕೂ ಅಧಿಕ ಕೊಳವೆ ಬಾವಿ: ಪ್ರಸ್ತುತ ನಗರದಲ್ಲಿ 15 ಸಾವಿರ ಕೊಳವೆ ಬಾವಿಗಳಿವೆ. ದಾಖಲೆಗಳ ಪ್ರಕಾರ 16,781 ಕೊಳವೆ ಬಾವಿಗಳಿವೆ. ಇದರಲ್ಲಿ 6,997 ಕೊಳವೆ ಬಾವಿಗಳು ಬತ್ತಿ ಹೋಗಿದ್ದು, 7,784 ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ. ಹೊಸ ಕೊಳವೆ ಬಾವಿ ಕೊರೆಸಲು ಸ್ಥಳೀಯ ಗುತ್ತಿಗೆದಾರರು ಮತ್ತು ತಮಿಳುನಾಡಿನ ಕೊಳವೆಬಾವಿ ಕೊರೆಯುವವರ ನಡುವೆ ದರದ ವಿಚಾರವಾಗಿ ಒಂದಷ್ಟು ಗೊಂದಲಗಳಿದ್ದು, ಇದನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಾ.7ರೊಳಗೆ ನೋಂದಣಿ ಮಾಡಿಸಿಕೊಳ್ಳದಿದ್ದರೆ ಟ್ಯಾಂಕರ್ ವಶಕ್ಕೆ: ಬೆಂಗಳೂರಿನಲ್ಲಿ 3,500 ಟ್ಯಾಂಕರ್ ಗಳು ಇದ್ದು, ಕೇವಲ 219 ಟ್ಯಾಂಕರ್ ಗಳು ಮಾತ್ರ ನೋಂದಣಿ ಮಾಡಿಸಿಕೊಂಡಿವೆ. ಬಿಡಬ್ಲ್ಯೂಎಸ್‍ಎಸ್‍ಬಿ 210 ಟ್ಯಾಂಕರ್ ಗಳನ್ನು ಈಗಾಗಲೇ ನೀರಿನ ಪೂರೈಕೆಗೆ ಬಳಸುತ್ತಿದ್ದಾರೆ. ನಗರದ ಎಲ್ಲ ನೀರಿನ ಟ್ಯಾಂಕರ್ ಮಾಲೀಕರು ಮಾ.7 ತಾರೀಖಿನ ವೇಳೆಗೆ ನೋಂದಣಿ ಮಾಡಿಸದಿದ್ದರೆ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಬಿಡಿಎ ಅಧ್ಯಕ್ಷ ಎನ್.ಎ ಹಾರಿಸ್, ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್, ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News