ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟ, ಏಕಾಂಗಿತನ ಕಾರಣ?: ನಟ ಜಗೇಶ್ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು : ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮಾದನಾಯಕನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಇದೀಗ ಅವರ ಆತ್ಮಹತ್ಯೆ ಬೆನ್ನಲ್ಲೇ ಹಲವು ಪ್ರಶ್ನೆಗಳು ಮೂಡಿದೆ.
ಮಾದನಾಯಕನಹಳ್ಳಿ ಪೊಲೀಸರು ಗುರುಪ್ರಸಾದ್ ಆತ್ಮಹತ್ಯೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮಠ, ಎದ್ದೇಳು ಮಂಜುನಾಥ ಸೇರಿದಂತೆ ಅನೇಕ ಸಿನಿಮಾಗಳನ್ನು ಗುರುಪ್ರಸಾದ್ ನಿರ್ದೇಶಿಸಿದ್ದರು. ಗುರುಪ್ರಸಾದ್ ನಿರ್ದೇಶಿಸಿದ್ದ ಮೊದಲ ಚಿತ್ರ ಮಠ ರಾಜ್ಯ ಪ್ರಶಸ್ತಿ ಪಡೆದುಕೊಂಡಿತ್ತು. ‘ಎದ್ದೇಳು ಮಂಜುನಾಥ’ ಚಿತ್ರ ಕೂಡ ದೊಡ್ಡ ಹಿಟ್ ಆಗಿತ್ತು. ಆದರೆ ‘ಡೈರೆಕ್ಟರ್ಸ್ ಸ್ಪೆಷಲ್’ ಸಿನಿಮಾದಲ್ಲಿಅವರಿಗೆ ಊಹಿಸಿದಷ್ಟು ಗಳಿಕೆ ಸಾಧ್ಯವಾಗಿಲ್ಲ ಎನ್ನಲಾಗಿದೆ. 2017ರಲ್ಲಿ ‘ಎರಡನೇ ಸಲ’ ಎಂಬ ಸಿನಿಮಾ ನಿರ್ದೇಶಿಸಿ ಗುರು ಪ್ರಸಾದ್ ಕೈ ಸುಟ್ಟುಕೊಂಡಿದ್ದರು. ಆ ಬಳಿಕ ಜಗ್ಗೇಶ್ ಅವರೊಂದಿಗೆ ‘ರಂಗನಾಯಕ’ ಸಿನಿಮಾ ಮಾಡಿದ್ದರು. ಸಿನಿಮಾ ಫ್ಲಾಪ್ ಆಗಿ ಗುರುಪ್ರಸಾದ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಗುರುಪ್ರಸಾದ್ ಹಲವರಿಂದ ಹಣ ಪಡೆದುಕೊಂಡು ವಾಪಸ್ ನೀಡಿರಲಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬಂದಿತ್ತು.
ಗುರುಪ್ರಸಾದ್ ಕೌಟುಂಬಿಕ ಜೀವನ ಅಷ್ಟೊಂದು ಚೆನ್ನಾಗಿರಲಿಲ್ಲ ಎಂದು ಹೇಳಲಾಗುತ್ತಿದ್ದು, ಮೊದಲನೇ ಪತ್ನಿಯಿಂದ ದೂರವಾಗಿದ್ದ ಅವರು ಎರಡನೇ ವಿವಾಹವಾಗಿದ್ದರು ಎನ್ನಲಾಗಿದೆ. ಈಗ ಅವರು ಒಂಟಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಅದರರ್ಥ ಅವರು ಎರಡನೇ ಪತ್ನಿಯಿಂದಲೂ ದೂರವಾಗಿದ್ದಂತೆ ಕಂಡು ಬರುತ್ತಿದೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಗುರುಪ್ರಸಾದ್ ಆತ್ಮಹತ್ಯೆ ಕುರಿತ ಸುದ್ದಿ ತಿಳಿದು ಆಘಾತ ವ್ಯಕ್ತಪಡಿಸಿದ ಜಗ್ಗೇಶ್ ಮಾಧ್ಯಮಗಳ ಜೊತೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಗುರುಪ್ರಸಾದ್ ಚಿತ್ರರಂಗದಲ್ಲಿ ಯಾರೊಂದಿಗೂ ಉತ್ತಮ ಸಂಬಂಧ ಇಟ್ಟುಕೊಂಡಿಲ್ಲ. ತಾನೊಬ್ಬ ಅತ್ಯುತ್ತಮ ನಿರ್ದೇಶಕ ಎಂಬ ಅಹಂಕಾರ ಅವರ ತಲೆಯಲ್ಲಿತ್ತು. ಅದರಿಂದಾಗಿ, ಅವರು ಯಾವುದೇ ನಟನ ಬಗ್ಗೆ ಗೌರವ ಹೊಂದಿರಲಿಲ್ಲ. ಅದರಿಂದಾಗಿ ಅವರು ಒಂಟಿಯಾಗಿದ್ದರು. ಸಿನಿಮಾಗಳಿಂದ, ರಿಯಾಲಿಟಿ ಶೋಗಳಿಂದ ಗಳಿಸಿದ ಹಣವನ್ನು ಅವರು ಕುಡಿತಕ್ಕೆ ಬಳಸುತ್ತಿದ್ದರು. ಹಠಮಾರಿ ಸ್ವಭಾವ, ಸೋತರೂ ಪಾಠ ಕಲಿಯದ ಮನಸ್ಥಿತಿ ಗುರು-ಹಿರಿಯಲ್ಲಿ ಗೌರವ ಇಲ್ಲದಿರುವುದು, ಇಂಥಹ ಮನಸ್ಥಿತಿಯೇ ನಟ, ನಿರ್ದೇಶಕ ಗುರುಪ್ರಸಾದ್ ಅವರು ಜೀವನದಲ್ಲಿ ಜಿಗುಪ್ಸೆ ಹೊಂದಲು ಕಾರಣ ಎಂದು ಜಗ್ಗೇಶ್ ಹೇಳಿದ್ದಾರೆ.
ಆರ್ಥಿಕ ಸಂಕಷ್ಟದಿಂದ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಗುರುಪ್ರಸಾದ್ ಅವರ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿರಲಿಲ್ಲ. ಅವರ ಆರ್ಥಿಕ ಸ್ಥಿತಿ ತಕ್ಕಮಟ್ಟಿಗೆ ಉತ್ತಮವಾಗಿತ್ತು. ಆದರೆ, ಅವರಿಗೆ ಕಾಡುತ್ತಿದ್ದ ಏಕಾಂಗಿತನವೇ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಜಗ್ಗೇಶ್ ಹೇಳಿದ್ದಾರೆ.