ಲೈಂಗಿಕ ಹಗರಣ | ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ ಸಂತ್ರಸ್ತೆ

Update: 2024-05-02 14:41 GMT

ಬೆಂಗಳೂರು : ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ಹಗರಣ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸಂತ್ರಸ್ತೆಯೊಬ್ಬರು ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ, ಜರ್ಮನಿಯಲ್ಲಿದ್ದು ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ನೀಡುವಂತೆ ತಮ್ಮ ವಕೀಲರ ಮೂಲಕ ಎಸ್‌ಐಟಿಗೆ ಗೆ ಮನವಿ ಮಾಡಿದ್ದರು. ಈ ಮನವಿಯನ್ನು ತಿರಸ್ಕರಿಸಿದ ತಂಡವು ಲುಕ್‍ಔಟ್ ನೊಟೀಸ್ ಜಾರಿ ಮಾಡಿದೆ. ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೂ ಲುಕ್‍ಔಟ್ ನೊಟೀಸ್ ರವಾನಿಸಲಾಗಿದೆ.

 ಪ್ರಜ್ವಲ್ ಬಂಧನ ಸಾಧ್ಯತೆ

ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ಹಾಗೂ ಎಚ್.ಡಿ.ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ವಿಚಾರಣೆಗೆ ಹಾಜರಾಗಬೇಕು ಎಂದು ಈಗಾಗಲೇ ಐಪಿಸಿ ಸೆಕ್ಷನ್ 41ರ ಅಡಿ ನೊಟೀಸ್ ಜಾರಿ ಮಾಡಿತ್ತು. ಈ ಬಗ್ಗೆ ಪ್ರಜ್ವಲ್ ಅವರು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಒಂದು ವೇಳೆ ವಿಚಾರಣೆಗೆ ಗೈರು ಹಾಜರಾದರೆ ಅವರನ್ನು ಬಂಧಿಸುವ ಕೆಲಸವನ್ನು ‘ಎಸ್ಸೈಟಿ’ ಮಾಡಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

ಹೇಳಿಕೆ ದಾಖಲು: ಪ್ರಕರಣ ಸಂಬಂಧ ಈಗ ಮತ್ತೊಬ್ಬ ಸಂತ್ರಸ್ತೆ ದೂರು ನೀಡಿದ್ದು, ಅದರಂತೆ ಸಂಜೆ ಮ್ಯಾಜಿಸ್ಟ್ರೇಟರ್ ಮುಂದೆ ಮತ್ತೊಬ್ಬ ಸಂತ್ರಸ್ತೆಯನ್ನು ಹಾಜರುಪಡಿಸಿ 164 ಅಡಿಯಲ್ಲಿ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಸುಮಾರು ಎರಡು ಗಂಟೆಗಳ ಕಾಲ ನೀಡಿದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಸಂಜೆಯೊಳಗೆ ವಿಚಾರಣೆಗೆ ಬರುತ್ತಾರೆ ಅಂದುಕೊಂಡಿದ್ದ ಎಚ್.ಡಿ.ರೇವಣ್ಣ ಅವರು ಕೊನೇ ಕ್ಷಣದಲ್ಲಿ ವಕೀಲರ ಮೂಲಕ ಜನಪ್ರತಿನಿಧಿಗಳ ಕೋರ್ಟ್‍ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆಯು ಶುಕ್ರವಾರ (ಮೇ 3) ನಡೆಯಲಿದ್ದು, ಯಾವ ತೀರ್ಪು ಹೊರ ಬರುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇದರ ಮಧ್ಯೆ ತನಿಖಾಧಿಕಾರಿಗಳು ಮತ್ತೊಂದು ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News