ʼಉತ್ತರದ ರಾಜ್ಯಗಳನ್ನು ಸಾಕಲು ಕನ್ನಡಿಗರು ಬೆವರು ಹರಿಸಬೇಕೆ?’: ಕಾಂಗ್ರೆಸ್‌ ಪ್ರಶ್ನೆ‌

Update: 2024-02-05 12:47 GMT

ಬೆಂಗಳೂರು: ‘2014ರಲ್ಲಿ ‘ಗುಜರಾತ್ ಮಾಡೆಲ್’ ಎಂಬ ಭ್ರಮೆ ಸೃಷ್ಟಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಗುಜರಾತ್ ಇಡೀ ದೇಶದಲ್ಲಿ ಅಭೂತಪೂರ್ವ ಅಭಿವೃದ್ಧಿ ಹೊಂದಿದೆ ಎಂದು ಹೇಳಿತ್ತು. ಗುಜರಾತ್ ಭಾರಿ ಅಭಿವೃದ್ಧಿ ಹೊಂದಿದ್ದೇ ಆಗಿದ್ದರೆ ತೆರಿಗೆ ಪಾಲಿನಲ್ಲಿ ಶೇ.51ರಷ್ಟು ಏರಿಕೆ ಮಾಡಿ ತೆರಿಗೆ ಹಂಚಿಕೆಯ ಸಿಂಹಪಾಲನ್ನು ಗುಜರಾತಿಗೆ ಕೊಡುತ್ತಿರುವುದೇಕೆ?, ಉತ್ತರ ರಾಜ್ಯಗಳನ್ನು ಸಾಕಾಣಿಕೆ ಮಾಡಲು ಕನ್ನಡಿಗರು ಬೆವರು ಹರಿಸಬೇಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸೋಮವಾರ ‘ನನ್ನ ತೆರಿಗೆ ನನ್ನ ಹಕ್ಕು’ ಅಭಿಯಾನದ ಅಂಗವಾಗಿ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರು ಕಾಂಗ್ರೆಸ್, ‘2024-25ರ ಸಾಲಿನ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕೇವಲ 44,485.49 ಕೋಟಿ ರೂ., ಉತ್ತರಪ್ರದೇಶಕ್ಕೆ 2,18,816.84 ಕೋಟಿ ರೂ., ಕನ್ನಡಿಗರು ಬೆವರು ಹರಿಸಿ ದುಡಿಯುವ ಹಣವನ್ನು ಕನ್ನಡಿಗರಿಗೆ ನೀಡದೆ ಉತ್ತರ ಭಾಗದ ರಾಜ್ಯಗಳಿಗೆ ನೀಡುತ್ತಿರುವ ಕೇಂದ್ರ ಸರಕಾರ ಕನ್ನಡಿಗರನ್ನು ಶೋಷಿಸುತ್ತಿದೆ. ಈ ಶೋಷಣೆ ನೋಡಿಕೊಂಡು ಕರ್ನಾಟಕದ 27 ಎನ್‍ಡಿಎ ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಮೋದಿ ಭಜನೆಗೆ ಮಾತ್ರ ಸೀಮಿತವಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದೆ.

‘ಕರ್ನಾಟಕದಿಂದ ಕೇಂದ್ರ ಸರಕಾರ ಸಂಗ್ರಹಿಸುವ ತೆರಿಗೆಯಲ್ಲಿ ಪ್ರತಿ 100 ರೂಪಾಯಿಯಲ್ಲಿ ಮರಳಿ ಕರ್ನಾಟಕಕ್ಕೆ ಕೊಡುತ್ತಿರುವುದು ಕೇವಲ 13 ರೂಪಾಯಿ. ಕರ್ನಾಟಕದಿಂದ ವಾರ್ಷಿಕ 4 ಲಕ್ಷ ಕೋಟಿ ರೂ.ಗೂ ಅಧಿಕ ಹಣ ಕೇಂದ್ರ ಸರಕಾರದ ಖಜಾನೆಗೆ ಸೇರುತ್ತಿದೆ. ಹೀಗಿದ್ದೂ ನೆರೆ ಪರಿಹಾರವಿಲ್ಲ, ಬರ ಪರಿಹಾರವಿಲ್ಲ, ಕೇಂದ್ರ ಪ್ರಯೋಜಿತ ಯೋಜನೆಗಳಿಗೆ ಅನುದಾನವಿಲ್ಲ, ಹಣಕಾಸು ಆಯೋಗದ ಅನುದಾನದಲ್ಲಿ ಬಿಡಿಗಾಸು, ಜಿಎಸ್ಟಿ ಹಂಚಿಕೆಯಲ್ಲಿ ಅನ್ಯಾಯ. ಇನ್ನೆಷ್ಟು ದಿನ ಈ ಅನ್ಯಾಯ ಸಹಿಸಬೇಕು?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಪ್ರಸಕ್ತ ಸಾಲಿನಲ್ಲಿ ನಾಡು ಭೀಕರ ಬರದಿಂದ ತತ್ತರಿಸಿದೆ, ರಾಜ್ಯದ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಒಟ್ಟು 33,770ಕೋಟಿ ರೂ.ನಷ್ಟ ಸಂಭವಿಸಿದೆ. ಕೇಂದ್ರಕ್ಕೆ 17,901 ಕೋಟಿ ರೂ.ಪರಿಹಾರ ಕೋರಿ ಮನವಿ ಸಲ್ಲಿಸಿ, 4 ತಿಂಗಳುಗಳು ಕಳೆದರೂ ಈ ವರೆಗೆ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ. ಕರುನಾಡಿಗೆ ಯಾಕೆ ಈ ಅನ್ಯಾಯ ಮೋದಿ ಅವರೇ?, ನಮ್ಮವರು ಶ್ರಮದಿಂದ ಕಟ್ಟಿದ ತೆರಿಗೆ ಹಣ ನಮ್ಮವರ ಕಷ್ಟಕಾಲಕ್ಕೆ ಬಾರದಿದ್ದರೆ ಏನು ಉಪಯೋಗ?’

ಸಿದ್ದರಾಮಯ್ಯ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News