ಬಿಜೆಪಿ, ಆರೆಸ್ಸೆಸ್ ಕುರಿತ ಹೇಳಿಕೆ | ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರು: ‘ಬಿಜೆಪಿ ಮತ್ತು ಆರೆಸ್ಸೆಸ್ ವಿಷವಿದ್ದಂತೆ. ಅದರ ರುಚಿ ನೋಡಬೇಡಿ’ ಎಂದು ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಬಿಜೆಪಿ ನಿಯೋಗವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಬುಧವಾರ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ವಕ್ತಾರ ಎಂ.ಜಿ.ಮಹೇಶ್, ಕಾನೂನು ಪ್ರಕೋಷ್ಟದ ಸಂಚಾಲಕ ವಸಂತ್ ಕುಮಾರ್, ಆರ್ಥಿಕ ಪ್ರಕೋಷ್ಟದ ಸಂಚಾಲಕ ಪ್ರಶಾಂತ್ ಜಿ.ಎಸ್., ಜಿಲ್ಲಾ ವಕ್ತಾರೆ ಕಾಂತಿಶೆಟ್ಟಿ ನೇತೃತ್ವದ ನಿಯೋಗ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ದೂರು ನೀಡಿದರು.
‘ಖರ್ಗೆಯವರು ತಮ್ಮ ಹೇಳಿಕೆ ಮೂಲಕ ಮತದಾರರನ್ನು ನಮ್ಮ ಪಕ್ಷದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಚುನಾವಣಾ ಪ್ರಚಾರದಿಂದ ಕೂಡಲೇ ನಿಬರ್ಬಂಧಿಸಬೇಕು’ ಎಂದು ಬಿಜೆಪಿ ನಿಯೋಗ ಆಗ್ರಹಿಸಿದೆ.
ಪ್ರಧಾನಿ ಮೋದಿಯವರ ಫೋಟೊ ಬಳಸಿಕೊಂಡು ಸುಳ್ಳು ಆರೋಪ ಮಾಡುತ್ತಿರುವ ಯುವ ಕಾಂಗ್ರೆಸ್‍ನ ಮೀಡಿಯಾ ಪ್ಯಾನೆಲಿಸ್ಟ್ ಅಕ್ಷತಾ ರವಿಕುಮಾರ್ ರ ಎಕ್ಸ್(ಟ್ವಿಟರ್)ಖಾತೆಯನ್ನು ಕೂಡಲೇ ನಿರ್ಬಂಧಿಸಬೇಕು ಎಂದು ಬಿಜೆಪಿ ನಿಯೋಗವು ಮತ್ತೊಂದು ಮನವಿಯನ್ನು ಆಯೋಗಕ್ಕೆ ನೀಡಿದೆ.