ವಿದ್ಯಾರ್ಥಿನಿ ಪ್ರಭುದ್ಯಾ ಕೊಲೆ ಪ್ರಕರಣ : 2 ಸಾವಿರ ರೂ.ವಿಚಾರಕ್ಕೆ ಕೃತ್ಯ, ಅಪ್ರಾಪ್ತನ ಬಂಧನ
ಬೆಂಗಳೂರು : ವಿದ್ಯಾರ್ಥಿನಿ ಪ್ರಭುದ್ಯಾಳ ಕೊಲೆ ಪ್ರಕರಣ ಸಂಬಂಧ ಎರಡು ಸಾವಿರ ರೂ. ಹಣದ ವಿಚಾರಕ್ಕೆ ಆಕೆಯ ಸಹೋದರನ ಸ್ನೇಹಿತನೇ ಹತ್ಯೆಗೈದಿರುವುದಾಗಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಈ ಪ್ರಕರಣ ಸಂಬಂಧ ಅಪ್ರಾಪ್ತ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಆದೇಶಾನುಸಾರ ಬಾಲಮಂದಿರದ ಸುಪರ್ದಿಗೆ ನೀಡಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್ ತಿಳಿಸಿದ್ದಾರೆ.
ಮೇ 15ರಂದು ನಗರದ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಬೃಂದಾವನ ಲೇಔಟ್‍ನಲ್ಲಿರುವ ಮನೆಯಲ್ಲಿ ಘಟನೆ ನಡೆದಿತ್ತು. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಪ್ರಭುದ್ಯಾ(19) ಕೈ ಹಾಗೂ ಕತ್ತು ಸೀಳಿದ ಸ್ಥಿತಿಯಲ್ಲಿ ಮನೆಯ ಸ್ನಾನದ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ಮೃತಳ ತಾಯಿ ಸೌಮ್ಯ ಕೆ.ಆರ್. ಎಂಬುವರು ನೀಡಿದ ದೂರಿನ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಕೃತ್ಯ ಎಸಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಕೊಲೆಯಾದ ಪ್ರಭುದ್ಯಾ ಅವರ ಸಹೋದರ ಹಾಗೂ ಆರೋಪಿ ಸ್ನೇಹಿತರಾಗಿದ್ದು, ಅದೇ ಸಲುಗೆಯಲ್ಲಿ ಆರೋಪಿ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಆಟವಾಡುವಾಗ ತನ್ನ ಇನ್ನೊಬ್ಬ ಸ್ನೇಹಿತನ ಕನ್ನಡಕ ಮುರಿದಿದ್ದ ಆರೋಪಿಗೆ ಅದನ್ನು ಸರಿ ಮಾಡಿಸಿಕೊಡಲು ಹಣದ ಅವಶ್ಯಕತೆಯಿತ್ತು. ಕೃತ್ಯಕ್ಕಿಂತ ಕೆಲವು ದಿನಗಳ ಹಿಂದಷ್ಟೇ ಪ್ರಭುದ್ಯಾಳ ಮನೆಗೆ ಬಂದಿದ್ದ ಆತ ಇದಕ್ಕಾಗಿಯೇ ಆಕೆಯ ಪರ್ಸ್‍ನಲ್ಲಿದ್ದ 2 ಸಾವಿರ ರೂ. ಹಣ ಕಳ್ಳತನ ಮಾಡಿದ್ದ ಎನ್ನಲಾಗಿದೆ.
ಈ ವಿಚಾರ ತಿಳಿದ ಪ್ರಭುದ್ಯಾ, ಹಣ ವಾಪಸ್ ನೀಡುವಂತೆ ಆರೋಪಿಯನ್ನು ಕೇಳಿದ್ದರು. ಮೇ 15ರಂದು ಮಧ್ಯಾಹ್ನ ಪ್ರಭುದ್ಯಾ ಒಬ್ಬರೇ ಇದ್ದಾಗ ಆಕೆಯ ಮನೆಗೆ ಬಂದಿದ್ದ ಆರೋಪಿ, ಹಣ ಕದ್ದಿರುವುದನ್ನು ಕ್ಷಮಿಸುವಂತೆ ಒತ್ತಾಯಿಸಿ ಆಕೆಯ ಕಾಲು ಹಿಡಿದಾಗ ಆಕೆ ಬಿದ್ದು ಪ್ರಜ್ಞಾಹೀನಳಾಗಿದ್ದರು. ಅದೇ ಸಂದರ್ಭವನ್ನು ಬಳಸಿಕೊಂಡಿದ್ದ ಆರೋಪಿ ಚಾಕುವಿನಿಂದ ಆಕೆಯ ಕೈ ಮತ್ತು ಕತ್ತು ಸೀಳಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದ ಎನ್ನಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸುಬ್ರಹ್ಮಣ್ಯಪುರ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿ ಅನುಮಾನಾಸ್ಪದವಾಗಿ ಓಡಾಡಿರುವುದು ಪತ್ತೆಯಾಗಿತ್ತು. ಬಳಿಕ ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯದ ವೃತ್ತಾಂತವನ್ನು ಬಾಯ್ಬಿಟ್ಟಿದ್ದಾನೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್ ಮಾಹಿತಿ ನೀಡಿದ್ದಾರೆ.