ದೇವಾಲಯಗಳಲ್ಲಿ ಸಂಗ್ರಹವಾಗುವ ಮೊತ್ತ ಸರಕಾರಕ್ಕೆ ಜಮಾ ಮಾಡುತ್ತಿಲ್ಲ: ರಾಮಲಿಂಗಾರೆಡ್ಡಿ ಸ್ಪಷ್ಟನೆ

Update: 2024-02-19 17:44 GMT

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 205 ‘ಎ’ ಪ್ರವರ್ಗ, 193 ‘ಬಿ’ ಪ್ರವರ್ಗ ಹಾಗೂ, 34,165 ‘ಸಿ’ ಪ್ರವರ್ಗದ ದೇವಸ್ಥಾನಗಳಿದ್ದು, ಇಲ್ಲಿ ಸಂಗ್ರಹವಾಗುವ ಮೊತ್ತವನ್ನು ಸರಕಾರಕ್ಕೆ ಜಮಾ ಮಾಡಲಾಗುವುದಿಲ್ಲ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ನಾಯಕ್ ಕೆ. ಮಾತನಾಡಿ, ‘ಎ ದರ್ಜೆ, ಬಿ ದರ್ಜೆ ದೇವಸ್ಥಾನಗಳಿಂದ ಸರಕಾರಕ್ಕೆ ನೂರಾರು ಕೋಟಿ ಅನುದಾನ ಬರುತ್ತಿದೆ. ಆದರೆ ಭಕ್ತರಿಗೆ ಕನಿಷ್ಟ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ ಎಂದು ಗಮನ ಸೆಳೆದಾಗ, ಸಚಿವರು ಉತ್ತರಿಸಿದರು.

ದೇವಾಲಯಗಳಲ್ಲಿ ಸಂಗ್ರಹವಾಗುವ ಮೊತ್ತವನ್ನು ಆಯಾ ದೇವಾಲಯಗಳಿಗೆ ಉಪಯೋಗಿಸಲಾಗುವುದು. ಹೆಚ್ಚುವರಿ ಹಣವನ್ನು ಆಯಾ ದೇವಾಲಯದ ಹೆಸರಿನಲ್ಲಿ ಠೇವಣಿ ಇರಿಸಲಾಗುವುದು. ದೇವಾಲಯದ ಆದಾಯವನ್ನು ಆಯಾಯಾ ದೇವಾಲಯದ ನಿತ್ಯ ಕಟ್ಲೆ, ಹೆಚ್ಚುಕಟ್ಲೆ, ಜಾತ್ರೆ, ಹಬ್ಬಗಳು, ಸಿಬ್ಬಂದಿ ವೆಚ್ಚ ಹಾಗೂ ಅಭಿವೃದ್ಧಿ ಕಾರ್ಯಗಳು ಮತ್ತು ನಿರ್ವಹಣೆಗೆ ಬಳಸಲಾಗುತ್ತದೆ ಎಂದು ಸಚಿವರು ಹೇಳಿದರು.

ಭಕ್ತಾದಿಗಳಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಹೈಮಾಸ್ಟ್ ಲ್ಯಾಂಪ್ ಅಳವಡಿಕೆ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿರುತ್ತದೆ. 65 ವರ್ಷದ ತುಂಬಿದ ಹಿರಿಯ ನಾಗರೀಕರಿಗೆ ಹಾಗೂ ವಿಶೇಷ ಚೇತನರಿಗೆ ಮತ್ತು 1 ವರ್ಷದೊಳಗೆ ಇರುವ ಚಿಕ್ಕಮಕ್ಕಳನ್ನು ಹೊಂದಿರುವ ತಾಯಂದಿರಿಗೆ ದೇವಾಲಯಗಳಲ್ಲಿ ನೇರವಾಗಿ ದೇವರ ದರ್ಶನ ಸೌಲಭ್ಯ ಒದಗಿಸಲಾಗುತ್ತಿದೆ. ದೇವಾಲಯಗಳಿಗೆ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ಮಕ್ಕಳಿಗೆ ಹಾಲುಣಿಸುವ ತಾಯಂದಿರಿಗೆ ಪ್ರತ್ಯೇಕ ಕ್ಯಾಬಿನ್/ಕೊಠಡಿ ನಮ್ಮ ಸರಕಾರ ಆದೇಶ ಹೊರಡಿಸಿದೆ ಎಂದು ಅವರು ತಿಳಿಸಿದರು.

ಆರ್ಚಕರಿಗರ ತಸ್ತಿಕ್/ವರ್ಷಾಸನ ಹಣವನ್ನು ನೇರವಾಗಿ ಅರ್ಚಕರ ಖಾತೆಗೆ ಜಮಾ ಮಾಡಲು ಪೋರ್ಟಲ್ ಹಾಗೂ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ. ಅರ್ಚಕ ನೌಕರರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಈ ವರ್ಷದಿಂದಲೇ ನೀಡಲು ಮಂಜೂರಾತಿ ನೀಡಲಾಗಿದೆ. ಸಿ ವರ್ಗದ ಅರ್ಚಕ/ನೌಕರರು ಹಾಗೂ ಅವರ ಕುಟುಂಬದ ಒಬ್ಬರು ಸದಸ್ಯರಿಗೆ ಭಾರತ್ ಗೌರವ್ ಕಾಶಿ ಯಾತ್ರೆ ಹಾಗೂ ದಕ್ಷಿಣ ಭಾರತ ಯಾತ್ರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಸಿ ವರ್ಗದ ಅನುವಂಶಿಕ ಅರ್ಚಕರಿಗೆ ವಯಸ್ಸಾಗಿದ್ದು ಹಾಗೂ ಅನಾರೋಗ್ಯದ ನಿಮಿತ್ತ ಪೂಜೆ ಮಾಡಲು ಅಶಕ್ತರಾಗಿದ್ದರೆ ಅವರ ಅನುವಂಶಿಕ ಹಕ್ಕು (ನೇಮಕಾತಿ) ವರ್ಗಾಯಿಸಲು ಸಂಬಂಧಪಟ್ಟ ತಹಶೀಲ್ದಾರರಿಗೆ ಅಧಿಕಾರ ನೀಡಿ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ಸೇವೆಯಲ್ಲಿ ಮರಣ ಹೊಂದಿದ ನೌಕರರಿಗೆ 2 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ. ದೇವಾಲಯಗಳ ಭದ್ರತೆ ಮತ್ತು ಸುರಕ್ಷತೆಗಾಗಿ ಅವಶ್ಯವಿರುವ ಕಡೆ ಸಿಸಿಟಿವಿಗಳನ್ನು ಅಳವಡಿಸಲಾಗಿರುತ್ತದೆ. ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ದೇವಾಲಯಗಳ ಭದ್ರತೆ ಮತ್ತು ಸುರಕ್ಷತೆ ಬಗ್ಗೆ ಕ್ರಮವಹಿಸಲಾಗಿರುತ್ತದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News