ಬೆಂಗಳೂರನ್ನು ಸಂಪೂರ್ಣವಾಗಿ ಕಡೆಗಣಿಸಿದ ಕಾಂಗ್ರೆಸ್‌ ಸರಕಾರ : ಆರ್‌.ಅಶೋಕ್

Update: 2024-10-24 11:44 GMT

ಬೆಂಗಳೂರು : ʼಕಾಂಗ್ರೆಸ್‌ ಸರಕಾರ ಬೆಂಗಳೂರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಸರಕಾರ ನಮಗೆ ಬ್ರ್ಯಾಂಡ್‌ ಬೆಂಗಳೂರು ನೀಡುವುದು ಬೇಡ, ಸುರಕ್ಷಿತವಾದ ರೆಗ್ಯುಲರ್‌ ಬೆಂಗಳೂರು ನೀಡಿದರೆ ಸಾಕುʼ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು.

ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿದ ಸ್ಥಳಕ್ಕೆ ಭೇಟಿ ನೀಡಿದ ಅವರು, ಸಂತ್ರಸ್ತರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‌ʼಕಾಂಗ್ರೆಸ್‌ ಸರಕಾರ ಬಂದ ನಂತರ ಬ್ರ್ಯಾಂಡ್‌ ಬೆಂಗಳೂರು ಎಂಬ ಹೆಸರು ಹುಟ್ಟುಹಾಕಿದ್ದಾರೆ. ಆದರೆ ನಗರದಲ್ಲಿ ದಿನಕ್ಕೊಂದು ಅವಘಡ ಸಂಭವಿಸುತ್ತಿದೆ. ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡ ಕುಸಿತವಾಗಿದ್ದು, ಎಂಟು ಅಮಾಯಕರು ಮೃತರಾಗಿದ್ದಾರೆ. ಇಲ್ಲಿನ 20 ಅಡಿ ರಸ್ತೆಗೆ ಹೆಚ್ಚೆಂದರೆ 3 ಮಹಡಿ ನಿರ್ಮಿಸಬಹುದು. ಆದರೆ 7 ಮಹಡಿ ನಿರ್ಮಿಸಲು ಹೊರಟಿದ್ದರಿಂದ ಅವಘಡ ನಡೆದಿದೆ. ಬಿಬಿಎಂಪಿ ಅಧಿಕಾರಿಗಳು ಇದನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ ಎಲ್ಲವೂ ಸರಿ ಇರುತ್ತಿತ್ತು‌ʼ ಎಂದರು.

ʼಕಾಂಗ್ರೆಸ್‌ ಸರಕಾರ ಇಂತಹ ಯಾವುದೇ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೆಲ ತಿಂಗಳ ಹಿಂದೆ ವಿದ್ಯುತ್‌ ತಂತಿ ತಗುಲಿ ತಾಯಿ ಮತ್ತು ಮಗು ಮೃತಪಟ್ಟಾಗ ಅದಕ್ಕೆ ಇಲಿ ಕಾರಣ ಎಂದು ಹೇಳಿದ್ದರು. ಮಳೆ ನೀರಿನಲ್ಲಿ ಮಗು ಕೊಚ್ಚಿಕೊಂಡು ಹೋಗಿರುವುದು, ಮರ ಬೀಳುವುದರಿಂದ ಅನಾಹುತ ಮೊದಲಾದವು ಬ್ರ್ಯಾಂಡ್‌ ಬೆಂಗಳೂರಿನ ಮಹಿಮೆಯಿಂದ ಆಗುತ್ತಿದೆʼ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರುವ ರಸ್ತೆಯ ಎರಡೂ ಬದಿ ಕಸ ರಾಶಿಯಾಗಿ ಬಿದ್ದಿದೆ. ಅಂದರೆ ಉಪಮುಖ್ಯಮಂತ್ರಿಯಾಗಲೀ, ಮುಖ್ಯಮಂತ್ರಿಯಾಗಲಿ, ಇಲ್ಲಿ ಯಾರಿಗೂ ಬೆಲೆ ಇಲ್ಲ. ಒಂದು ವಾರದಿಂದ ಸರಿಯಾಗಿ ಕಸ ವಿಲೇವಾರಿ ಮಾಡಿಲ್ಲ. ವಿದ್ಯುತ್‌ ಕಂಬಗಳಿಂದ ಇನ್ನೆಷ್ಟು ಜನ ಸಾಯುತ್ತಾರೆಂದು ಗೊತ್ತಿಲ್ಲ. ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದರು.

ಕಟ್ಟಡ ನಿರ್ಮಾಣದ ವಿಚಾರದಲ್ಲಿ ಸರಕಾರ ಮಾರ್ಗಸೂಚಿ ರೂಪಿಸಬೇಕು. ಕಟ್ಟಡಗಳ ಬಗ್ಗೆ ಸದಾ ನಿಗಾ ಇರಿಸುವ ಕೆಲಸ ಮಾಡಬೇಕು. ಈ ಹಿಂದೆ ಬಿಜೆಪಿ ಸರಕಾರವಿದ್ದಾಗ, ಪ್ರತಿ ಮಳೆಗಾಲಕ್ಕೆ ಮುನ್ನ ಸಭೆ ನಡೆಸಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚಿಸಲಾಗಿತ್ತು. ಜೊತೆಗೆ ಹಣ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಸರಕಾರ ಸಭೆ ನಡೆಸಿಲ್ಲ, ಪರಿಹಾರ ಕಾರ್ಯಾಚರಣೆಗೆ, ರಾಜಕಾಲುವೆ ಹೂಳು ತೆಗೆಯಲು ಹಣ ಬಿಡುಗಡೆ ಮಾಡಿಲ್ಲ. ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಜನರು ಅಧಿಕಾರ ಕೊಟ್ಟಾಗ ಕೆಲಸ ಮಾಡಬೇಕೆ ಹೊರತು, ಹಿಂದಿನವರು ಏನು ಮಾಡಿದ್ದಾರೆ ಎಂದು ಮಾತಾಡಬಾರದು. ಕಾಂಗ್ರೆಸ್‌ನವರು ಮೊದಲು ಕೆಲಸ ಮಾಡಲಿ. ಆಪಾದನೆ ಮಾಡಿಕೊಂಡು ಇದ್ದರೆ, ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News