ಟ್ಯಾಂಕರ್ ಸ್ವಚ್ಛಗೊಳಿಸಲು ಸರಕಾರದ ಬಳಿ ಹಣವಿಲ್ಲ : ಆರ್.ಅಶೋಕ್

Update: 2024-06-15 15:05 GMT

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದಲ್ಲೇ ಜನರು ಕಲುಷಿತ ನೀರು ಕುಡಿದು ಮೃತಪಟ್ಟಿದ್ದಾರೆ. ಟ್ಯಾಂಕರ್ ಗಳನ್ನು ಸ್ವಚ್ಛಗೊಳಿಸಲು ಸರಕಾರದ ಬಳಿ ಹಣವಿಲ್ಲ. ಜನರಿಗೆ ಶುದ್ಧ ಕುಡಿಯುವ ನೀರು ನೀಡುವ ಯೋಗ್ಯತೆ ಕೂಡ ಈ ಸರಕಾರಕ್ಕಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಗಿನಡಿ ಅವರ ಕ್ಷೇತ್ರ ವರುಣದಲ್ಲಿ ಕಲುಷಿತ ನೀರನ್ನು ಜನರು ಸೇವಿಸಿ ಸಾವಿಗೀಡಾಗಿದ್ದಾರೆ. ಅಂದರೆ ಮುಖ್ಯಮಂತ್ರಿಗಳಿಗೆ ಕುಡಿಯುವ ನೀರು ನೀಡುವ ಯೋಗ್ಯತೆ ಇಲ್ಲ ಎಂದು ಟೀಕಿಸಿದರು.

ಈಗ ತುಮಕೂರಿನಲ್ಲೂ ಕಲುಷಿತ ನೀರು ಸೇವಿಸಿ ಆರು ಜನರ ಸಾವಾಗಿದೆ. ಇದಕ್ಕೆ ಜಿಲ್ಲಾಧಿಕಾರಿಯನ್ನು ಕೇಳಿದರೆ ಮೂತ್ರಪಿಂಡ ಸಮಸ್ಯೆ ಎನ್ನುತ್ತಾರೆ. ಆರೋಗ್ಯ ಸಮಸ್ಯೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಅದನ್ನೆ ಸಬೂಬು ಮಾಡಬಾರದು. ಈ ಕುರಿತು ವರದಿ ಕೇಳಿದ್ದೇನೆ. ಕೊಪ್ಪಳದಲ್ಲಿಯೂ ಜನರು ಕಲುಷಿತ ನೀರು ಸೇವಿಸಿ ಆಸ್ಪತ್ರೆ ಸೇರಿದ್ದಾರೆ. ಶಾಸಕರು ಅನುದಾನ ಕೇಳಿದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಾಯಿ ಮುಚ್ಚಿಕೊಂಡು ಸುಮ್ಮನಿರಿ ಎಂದಿದ್ದಾರೆ. ಜನರ ಸಾವಿಗೆ ಸರಕಾರದ ನಿರ್ಲಕ್ಷ್ಯವೇ ನೇರ ಕಾರಣ ಎಂದು ಅವರು ಕಿಡಿಕಾರಿದರು.

ಟ್ಯಾಂಕರ್ ಮಾಫಿಯಾ: ಎಟಿಎಂ ಕಾಂಗ್ರೆಸ್ ಸರಕಾರ ಹೈಕಮಾಂಡ್ ಗೆ ಹಣ ಕಳುಹಿಸಲು ಟ್ಯಾಂಕರ್ ಮಾಫಿಯಾವನ್ನು ಬಳಸಿಕೊಂಡಿದೆ. ಕಾಂಗ್ರೆಸ್ ಸರಕಾರ ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನದಲ್ಲಿ ಶೇ.25 ರಷ್ಟು ಕಡಿತ ಮಾಡಿ ಮೂಲಸೌಕರ್ಯ ಸಿಗದಂತೆ ಮಾಡಿದೆ. ಇದರ ಪ್ರತಿಫಲವಾಗಿ ಜನರಿಗೆ ಸರಿಯಾಗಿ ನೀರು ದೊರೆಯುತ್ತಿಲ್ಲ. ಸಿಎಂ ಸೂಚನೆಗೆ ಅಧಿಕಾರಿಗಳು ಬೆಲೆ ನೀಡದೆ ಕೈ ಚೆಲ್ಲಿದ್ದಾರೆ. ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ ಎಂದು ಅಶೋಕ್ ದೂರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News