ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನವಾಗುವ ಸಾಧ್ಯತೆಗಳಿಲ್ಲ : ಸಚಿವ ಸತೀಶ್ ಜಾರಕಿಹೊಳಿ

Update: 2024-02-02 15:51 GMT

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನವಾಗುವ ಸಾಧ್ಯತೆಗಳಿಲ್ಲ. ಅನಗತ್ಯವಾಗಿ ಶಾಸಕ ಲಕ್ಷ್ಮಣ ಸವದಿ ಹಾಗೂ ಇತರರ ಹೆಸರುಗಳನ್ನು ತೇಲಿಬಿಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಮತ ನಮಗೆ, ಅವರ ಮತ ಅವರಿಗೆ ಬೀಳಲಿವೆ. ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್‍ ಗೆ 3, ಬಿಜೆಪಿ-ಜೆಡಿಎಸ್‍ಗೆ 1 ಸ್ಥಾನದ ಹಂಚಿಕೆಯಾಗಬಹುದು. ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರಿಂದ ಅಡ್ಡ ಮತದಾನವಾಗುವ ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಯಾಗುವುದಾದರೆ ಸ್ವಾಗತಾರ್ಹ. ಇದರಿಂದ ಪಕ್ಷದ ಬಲ ಹೆಚ್ಚಾಗಲಿದೆ. ಆದರೆ, ಅಭ್ಯರ್ಥಿಗಳ ಆಯ್ಕೆ ವಿಚಾರ ಹೈಕಮಾಂಡ್‍ಗೆ ಸೇರಿದ್ದಾಗಿದೆ. ನಿನ್ನೆ ರಾತ್ರಿ ನಡೆದ ಸಚಿವರ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ ಎಂದು ಅವರು ಹೇಳಿದರು.

ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ನೇಮಿಸದೇ ಇರುವುದರಿಂದ ಲೋಕಸಭೆ ಚುನಾವಣೆ ಮೇಲೆ ಸ್ವಲ್ಪಮಟ್ಟಿನ ಪರಿಣಾಮವಾಗುವ ಸಾಧ್ಯತೆಯಿದೆ. ಆದರೆ ಈ ಹಿಂದೆ ಯಾವುದೇ ಸ್ಥಾನಮಾನವಿಲ್ಲದೆ ಇದ್ದಾಗಲೂ ನಾವು ಶಾಸಕರಾಗಿ ಗೆದ್ದಿದ್ದೇವೆ. ಪ್ರಸ್ತುತ ಯುದ್ಧ ಮಾಡುವ ಕಾಲ ಅಲ್ಲ ಎಂದು ಹೈಕಮಾಂಡ್ ಸೂಚಿಸಿರುವುದರಿಂದ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಚರ್ಚೆ ಮುಂದುವರೆಸುವುದಿಲ್ಲ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News