ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಕರೆ: ಪ್ರತ್ಯೇಕ ಎರಡು ಪ್ರಕರಣ ದಾಖಲು

Update: 2024-03-24 12:38 GMT

ಬೆಂಗಳೂರು: ಸೈಬರ್ ಕಳ್ಳರು ಮುಂಬೈ ಪೊಲೀಸರ ಸೋಗಿನಲ್ಲಿ ಹೈಕೋರ್ಟ್ ಇಬ್ಬರು ನ್ಯಾಯಮೂರ್ತಿಗಳಿಗೆ ಕರೆ ಮಾಡಿ ಬೆದರಿಕೆ ಹಾಕಿರುವ ಆರೋಪದಡಿ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿರುವುದು ವರದಿಯಾಗಿದೆ.

ನ್ಯಾಯಮೂರ್ತಿಗಳ ನಿರ್ದೇಶನದ ಮೇರೆಗೆ ಹೈಕೋರ್ಟ್‍ನ ಭದ್ರತಾ ಅಧಿಕಾರಿಗಳಾದ ಇನ್‍ಸ್ಪೆಕ್ಟರ್ ಜಿ.ಶೋಭಾ ಮತ್ತು ಸಬ್‍ಇನ್‍ಸ್ಪೆಕ್ಟರ್ ಎ.ಆರ್.ರಘುನಾಯ್ಕ ನೀಡಿದ ದೂರಿನನ್ವಯ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಿಸಿಕೊಂಡಿರುವ ವಿಧಾನಸೌಧ ಠಾಣಾ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಮಾ.15ರಂದು ಹೈಕೋರ್ಟ್‍ನ ಇಬ್ಬರು ನ್ಯಾಯಮೂರ್ತಿಗಳಿಗೆ ಕರೆ ಮಾಡಿರುವ ಅಪರಿಚಿತ ಇಬ್ಬರು ಆರೋಪಿಗಳು, ಡಿ.ಒ.ಪಿ.ಟಿ ಇಲಾಖೆಯಿಂದ ಕರೆ ಮಾಡುತ್ತಿದ್ದೇನೆ. ತಾವು ಒಂದು ಸಿಮ್ ಕಾರ್ಡ್ ಹೊಂದಿದ್ದೀರಿ. ಆ ಸಿಮ್ ಕಾರ್ಡ್‍ನಿಂದ ಕಾನೂನು ಬಾಹಿರವಾಗಿ ಜಾಹೀರಾತು ಹಾಗೂ ಆಕ್ಷೇಪಾರ್ಹ ಮೆಸೇಜ್ ಹಾಕುತ್ತಿದ್ದೀರಿ. ಇದರಿಂದ ನಿಮ್ಮ ಮೇಲೆ ಮುಂಬೈನ ಅಂದೇರಿ ಈಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಬೇಕಾದರೆ ಈ ಕರೆಯನ್ನು ಪೊಲೀಸರಿಗೆ ವರ್ಗಾವಣೆ ಮಾಡುತ್ತೇನೆ, ಅವರ ಜೊತೆ ಮಾತನಾಡಿ ನಿಮ್ಮ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಿ ಎಂದು ಹೇಳಿ ಕರೆಯನ್ನು ಇನ್ನೊಬ್ಬನಿಗೆ ವರ್ಗಾವಣೆ ಮಾಡಿದ್ದ. ಆ ವ್ಯಕ್ತಿ ತನ್ನನ್ನು ಪೊಲೀಸ್ ಅಂತ ಹೇಳಿಕೊಂಡು ಏರು ಧ್ವನಿಯಲ್ಲಿ ಮಾತನಾಡಿದ್ದಾನೆ ಎಂದು ಹೇಳಲಾಗಿದೆ.

ಬಳಿಕ ನ್ಯಾಯಮೂರ್ತಿಗಳು ಕರೆ ನಿಷ್ಕ್ರಿಯಗೊಳಿಸಿದ್ದಾರೆ. ವ್ಯವಸ್ಥಿತವಾಗಿ ಸಂಚು ರೂಪಿಸಿ ಬೆದರಿಕೆ ಹಾಕಿ ಹಣ ಪಡೆದು ಮೋಸ ಮಾಡುವ ಗುಂಪು ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿ, ಭದ್ರತಾ ಅಧಿಕಾರಿಗೆ ದೂರು ನೀಡಲು ನ್ಯಾಯಮೂರ್ತಿಗಳು ನಿರ್ದೇಶನ ನೀಡಿದ್ದಾರೆ. ಸದ್ಯ ಪ್ರತ್ಯೇಕ ಎರಡು ಪ್ರಕರಣಗಳ ಆಧಾರದಲ್ಲಿ ತನಿಖೆ ಆರಂಭಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News