ನಾಳೆ(ಎ.2) ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ‘ಇಂಡಿಯಾ ಒಕ್ಕೂಟ’ದ ಮುಖಂಡರ ಸಭೆ
ಬೆಂಗಳೂರು : ಪ್ರಜಾಪ್ರಭುತ್ವ ಉಳಿವಿಗಾಗಿ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿರುವ ‘ಇಂಡಿಯಾ ಒಕ್ಕೂಟ’ ರಾಜ್ಯದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಕೋರಿ, ನಾಳೆ(ಎ.2) ಆಮ್ ಆದ್ಮಿ, ಸಿಪಿಐ, ಸಿಪಿಎಂ, ಡಿಎಂಕೆ, ಫಾರ್‍ವರ್ಡ್ ಬ್ಲಾಕ್, ಸಿಪಿಐ(ಎಂಎಲ್), ಸಮಾಜವಾದಿ ಪಾರ್ಟಿ ಸೇರಿದಂತೆ ಇನ್ನಿತರ ಪಕ್ಷಗಳ ಮುಖಂಡರ ಸಭೆ ಕರೆಯಲಾಗಿದೆ.
ನಾಳೆ (ಎ.2) ಮಧ್ಯಾಹ್ನ 2ಗಂಟೆಗೆ ಇಲ್ಲಿನ ಕ್ವೀನ್ಸ್‍ರಸ್ತೆಯಲ್ಲಿನ ಭಾರತ್ ಜೋಡೋ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಸಿಪಿಎಂ ಪ್ರಧಾನ ಕಾರ್ಯದರ್ಶಿ ಬಸವರಾಜು, ಸಿಪಿಐ ಸಾತಿ ಸುಂದರೇಶ್, ಡಿಎಂಕೆ ಪ್ರಧಾನ ಕಾರ್ಯದರ್ಶಿ ರಾಮಸ್ವಾಮಿ ನಟೇಶನ್, ಫಾರ್‍ವರ್ಡ್ ಬ್ಲಾಕ್‍ನ ಶಿವಶಂಕರ್ ಜಿ.ಆರ್., ಸಿಪಿಐ (ಎಂಎಲ್)ನ ಕ್ಲಿಪ್ಟನ್ ಡಿ.ರೋಜಾರಿಯೋ, ರಾಷ್ಟ್ರೀಯ ಜನತಾ ದಳದ ಯಾಕುಬ್ ಗುಲ್ವಾಡಿ ಪಾಲ್ಗೊಳ್ಳಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂಡಿಯಾ ಒಕ್ಕೂಟದ ಮುಖಂಡರ ಸಭೆ ಕರೆದಿದ್ದು, ಈ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಸೇರಿದಂತೆ ಹಲವು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.