ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಬಂದೂಕು, ಪೊಲೀಸ್ ಸಿಬ್ಬಂದಿ ದಾಖಲೆ ನೀರುಪಾಲು

Update: 2023-11-09 11:41 GMT

ಬೆಂಗಳೂರು, ನ.9: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಉಲ್ಲಾಳ ಉಪನಗರದ ನಗರ ಪಶ್ಚಿಮ ವಿಭಾಗದ ಸಶಸ್ತ್ರ ಮೀಸಲು ಪಡೆಯ ನಿಯಂತ್ರಣ ಕೊಠಡಿಗೆ ನೀರು ನುಗ್ಗಿ ಪಿಸ್ತೂಲುಗಳಿಗೆ ಹಾನಿಯಾಗಿಮ ದಾಖಲೆಗಳು ನೀರುಪಾಲಾಗಿವೆ.

ಏಕಾಏಕಿ ಮಳೆಯ ನೀರು ನುಗ್ಗಿದ ಪರಿಣಾಮ ನಿಯಂತ್ರಣ ಕೊಠಡಿಯಲ್ಲಿದ್ದ ನೂರಾರು ಬಂದೂಕುಗಳು, ಪೊಲೀಸ್ ಭದ್ರತಾ ಸಿಬ್ಬಂದಿಯ ದಾಖಲೆ ಪತ್ರಗಳು, ಇನ್ನಿತರೆ ಕಡತಗಳು ನೀರಿನಲ್ಲಿ ಮುಳುಗಿ ಹಾನಿಯಾಗಿವೆ. ಬೆಳಗ್ಗೆ ಎಂದಿನಂತೆ ಸಿಬ್ಬಂದಿ ಕೊಠಡಿಗೆ ಬಂದು ಪರಿಶೀಲನೆ ನಡೆಸಿದಾಗ ನೀರು ನುಗ್ಗಿರುವುದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ದೌಡಾಯಿಸಿದ ಕೊಠಡಿ ಸಿಬ್ಬಂದಿ, ನೀರಿಗೆ ಹಾನಿಯಾಗಿದ್ದ ಬಂದೂಕು, ಕಡತಗಳನ್ನು ರಕ್ಷಣೆ ಮಾಡಿ, ಪರಿಶೀಲನೆ ನಡೆಸಿದರು.

ಅದೇ ರೀತಿ , ನಗರದ ಕೆಲ ಕಡೆ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಯಲಹಂಕದ ಕೋಗಿಲೆ ಕ್ರಾಸ್ ಬಳಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಸ್ಥಳಕ್ಕೆ ಬಾರದ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಪ್ರತಿ ಭಾರಿ ಮಳೆ ಬಂದಾಗಲೂ ಇದೇ ರೀತಿಯ ಸಮಸ್ಯೆಯಾಗುತ್ತೆ. ನೂರಾರು ಭಾರಿ ದೂರು ಕೊಟ್ಟರೂ ಪಾಲಿಕೆ ಕ್ಯಾರೇ ಅಂದಿಲ್ಲ ಎಂದು ಬಿಬಿಎಂಪಿ ವಿರುದ್ಧ ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಸಹಕಾರ ನಗರ: ಇನ್ನೂ, ಸಹಕಾರ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಹೀಗಾಗಿ ಬಿಬಿಎಂಪಿ ವಿರುದ್ಧ ಘೋಷಣೆ ಕೂಗಿ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕೆಂದು ಆಗ್ರಹಿಸಿ ಸ್ಥಳೀಯರು ಕೆಲಕಾಲ ರಸ್ತೆ ತಡೆದು ಪ್ರತಿಭಟಿಸಿದರು.

ಪ್ರತಿ ಭಾರಿ ನೀರು ತುಂಬಿ ಅಪಾರ ಹಾನಿಯಾಗುತ್ತಿದೆ. ನಮ್ಮ ಪರಿಸ್ಥಿತಿಗೆ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ರಾಜಕಾಲುವೆ ಒತ್ತುವರಿ ತೆರವು ಮಾಡಿದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಕೆಆರ್ ಮಾರ್ಕೆಟ್ ಹಿಂಭಾಗದ ಮನೆಗಳಿಗೂ ನೀರು ನುಗ್ಗಿದ್ದು, ರಾತ್ರಿ ಕೆಲವೆಡೆ ರಸ್ತೆಯಲ್ಲಿ ಐದಾರು ಅಡಿಗಳಷ್ಟು ಮಳೆ ನೀರು ನಿಂತಿದ್ದ ದೃಶ್ಯ ಕಂಡಿತು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News