‘ನಾಟಕ ಅಕಾಡೆಮಿ’ ಪ್ರಶಸ್ತಿ ಪ್ರಕಟ | ಉಮಾಶ್ರೀ, ಕೋಟಿಗಾನಹಳ್ಳಿ ರಾಮಯ್ಯ ಸೇರಿ ಮೂವರಿಗೆ ‘ಜೀವಮಾನ ಪ್ರಶಸ್ತಿ’

Update: 2024-08-08 16:12 GMT

ಕೋಟಿಗಾನಹಳ್ಳಿ ರಾಮಯ್ಯ/ಉಮಾ‍ಶ್ರೀ

ಬೆಂಗಳೂರು : ನಾಟಕ ಅಕಾಡೆಮಿಯ ವತಿಯಿಂದ ನೀಡುವ ‘ಜೀವಮಾನ ಪ್ರಶಸ್ತಿ’ಗೆ ವಿಧಾನ ಪರಿಷತ್ ಸದಸ್ಯ ಹಾಗೂ ನಟಿ ಉಮಾಶ್ರೀ(2022), ನಾಟಕಕಾರ ಡಾ.ಎಚ್.ಎಸ್.ಶಿವಪ್ರಕಾಶ್(2023) ಹಾಗೂ ರಂಗ ಸಂಘಟಕ, ಕೋಲಾರ ಆದಿಮ ಸಾಂಸ್ಕೃತಿಕ ಪ್ರತಿಷ್ಠಾನದ ಕೆ.ರಾಮಯ್ಯ(ಕೋಟಿಗಾನಹಳ್ಳಿ ರಾಮಯ್ಯ)(2024) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ತಿಳಿಸಿದ್ದಾರೆ.

ಗುರುವಾರ ಕನ್ನಡ ಭವನದಲ್ಲಿನ ಅಕಾಡೆಮಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2022ರ ವಾರ್ಷಿಕ ಪ್ರಶಸ್ತಿಗಳಿಗೆ ನೂರ್ ಅಹಮ್ಮದ್ ಶೇಖ್, ಎಸ್.ಎ.ಖಾನ್, ಅಚ್ಯುತ್ ಕುಮಾರ್, ಡಾ. ಲಕ್ಷ್ಮೀಪತಿ ಕೋಲಾರ, ರಮೇಶ್ ಪಂಡಿತ್ ಸೇರಿದಂತೆ 25 ಗಣ್ಯರನ್ನು ಆಯ್ಕೆ ಮಾಡಲಾಗಿದೆ. 2023ರ ವಾರ್ಷಿಕ ಪ್ರಶಸ್ತಿಗಳಿಗೆ ಕೆ. ಹುಸೇನ್ ಸಾಬ್, ಬಿ.ಸುರೇಶ್, ರಜನಿ ಗರುಡ ಸೇರಿದಂತೆ 25 ಗಣ್ಯರನ್ನು ಆಯ್ಕೆ ಮಾಡಲಾಗಿದೆ. 2024ರ ವಾರ್ಷಿಕ ಪ್ರಶಸ್ತಿಗಳಿಗೆ ಪ್ರಕಾಶ್ ರೈ, ವಸಂತ್ ಅಮೀನ್, ಚಾಂದಿನಿ (ಲೈಂಗಿಕ ಅಲ್ಪಸಂಖ್ಯಾತ), ಅಬ್ರಾಹಿಂ ಡಿ. ಸಿಲ್ವಾ ಸೇರಿದಂತೆ 25 ಗಣ್ಯರನ್ನು ಆಯ್ಕೆ ಮಾಡಲಾಗಿದೆ ಎಂದರು.

ಯುವಪ್ರಶಸ್ತಿಗೆ ಡಾ.ಬೇಲೂರು ರಘುನಂದನ್, ರಾಜಗುರು ಹೊಸಕೋಟೆ, ಅಪ್ಪಣ್ಣ ರಾಮದುರ್ಗ, ಕಾಲೇಜು ರಂಗಭೂಮಿ ಪ್ರಸಿದ್ಧ ಸಂಘಟಕ ಹಾಗೂ ನಟ ರಂಗಸ್ವಾಮಿ ಜಿ. ಅವರನ್ನು ಆಯ್ಕೆ ಮಾಡಲಾಗಿದೆ. ಹೊರನಾಡ ಕಲಾವಿದರಲ್ಲಿ ಮುಂಬೈನ ರಂಗನಿರ್ದೇಶಕಿ ಕನ್ನಡತಿ ನಂದಿತಾ ಯಾದವ್, ಪಾಂಡಿಚೇರಿ ವಿಶ್ವವಿದ್ಯಾನಿಲಯದ ರಂಗತಜ್ಞೆ ಪ್ರಾಧ್ಯಾಪಕಿ ಡಾ.ಪವಿತ್ರಾ ಅವರನ್ನು ಆಯ್ಕೆ ಮಾಡಲಾಗಿದೆ.

ರಾಜ್ಯಾದ್ಯಂತ ವೃತ್ತಿರಂಗಭೂಮಿಯ 30ಕ್ಕೂ ಹೆಚ್ಚು ಕಲಾವಿಧರನ್ನು ವಾರ್ಷಿಕ ಪ್ರಶಸ್ತಿ ಮತ್ತು ದತ್ತನಿಧಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದ್ದು, ಒಟ್ಟಾರೆ 3 ಜೀವಮಾನ ಸಾಧನೆ, 75 ವಾರ್ಷಿಕ ಪ್ರಶಸ್ತಿ ಮತ್ತು 15 ದತ್ತಿನಿಧಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಜೀವಮಾನ ಸಾಧನ ಪ್ರಶಸ್ತಿಗೆ 50ಸಾವಿರ ರೂ., ವಾರ್ಷಿಕ ಪ್ರಶಸ್ತಿಗೆ 25ಸಾವಿರ ರೂ., ದತ್ತಿ ಪ್ರಶಸ್ತಿಗಳಿಗೆ 10ಸಾವಿರ ರೂ.ನಗದು ಬಹುಮಾನ ನೀಡಲಾಗುತ್ತದೆ ಎಂದು ಕೆ.ವಿ.ನಾಗರಾಜಮೂರ್ತಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News