ಮಹಾರಾಷ್ಟ್ರ ಚುನಾವಣೆ ಬಳಿಕ ಯಾವ ಗ್ಯಾರಂಟಿಗಳೂ ಇರುವುದಿಲ್ಲ : ಛಲವಾದಿ ನಾರಾಯಣಸ್ವಾಮಿ

Update: 2024-11-01 12:26 GMT

 ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಕೊಟ್ಟ ಐದು ಗ್ಯಾರಂಟಿ ಯೋಜನೆಗಳೂ ನಾಪತ್ತೆ ಆಗುತ್ತವೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಶುಕ್ರವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಕಾಂಗ್ರೆಸ್ ಸರಕಾರದ ಕಥೆ ಹೇಗಾಗಿದೆ ಎಂದರೆ ‘ಎತ್ತು ಏರಿಗೆ ಕೋಣ ನೀರಿಗೆ’ ಎಂಬಂತಾಗಿದೆ. ದಯವಿಟ್ಟು ಎತ್ತು ಯಾರು, ಕೋಣ ಯಾರೆಂದು ಕೇಳದಿರಿ. ಅದನ್ನು ನೀವೇ ಅರ್ಥ ಮಾಡಿಕೊಳ್ಳಿ ಎಂದು ನುಡಿದರು.

5 ಗ್ಯಾರಂಟಿಗಳಲ್ಲಿ ಯಾವುದೂ ಸರಿಯಾಗಿ ಜನರನ್ನು ತಲುಪುತ್ತಿಲ್ಲ. ಗೃಹಲಕ್ಷ್ಮಿ 3 ತಿಂಗಳಿನಿಂದ ಬಂದಿಲ್ಲ. ಬೆಳಗಾವಿಯ ಲಕ್ಷ್ಮಕ್ಕ ಹೇಳುತ್ತಿದ್ದರೂ ಹಣ ಬರುತ್ತಿಲ್ಲ. ಅನ್ನಭಾಗ್ಯದ ಭಾಗ್ಯವೂ ಇಲ್ಲ. ಸರ್ವರ್ ಡೌನ್, ಇವತ್ತು-ನಾಳೆ ಅನ್ನುತ್ತಾರೆ. ಯುವನಿಧಿ ಯಾರಿಗೆ ಬಂತೆಂದು ಒಬ್ಬರೂ ಹೇಳಿಲ್ಲ. ಈ ಸ್ಥಿತಿಯಲ್ಲಿ ಶಕ್ತಿ ಯೋಜನೆ ವಾಪಸ್ ಪಡೆಯುವ ಕುರಿತಂತೆ ಡಿಕೆಶಿ ಮಾತನಾಡಿದ್ದಾರೆ ಎಂದು ಗಮನ ಸೆಳೆದರು.

ವಿರೋಧಗಳು ಪ್ರಾರಂಭ ಆದಾಗ ಒಂದೇ ದಿನಕ್ಕೆ ಯೂಟರ್ನ್ ಪಡೆದರು. ಸಿಎಂ ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದರು. ಮಹಾರಾಷ್ಟ್ರದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಗ್ಯಾರಂಟಿ ಘೋಷಿಸಿದ ಕಾರಣ ಹಾಗೂ ಮತಬ್ಯಾಂಕ್ ಕಿತ್ತು ಹೋಗುವ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ದಿಲ್ಲಿಯಿಂದ ಬೆಂಗಳೂರಿಗೆ ಎದ್ದುಬಿದ್ದು ಓಡಿ ಬಂದರು. ಏರಿಗೆ ಹೋಗುತ್ತಿದ್ದ ಎತ್ತು ಮತ್ತು ನೀರಿಗೆಳೆಯುತ್ತಿದ್ದ ಕೋಣನನ್ನು ಕುಳಿತುಕೊಳ್ಳಿಸಿ ಮಾತನಾಡಿದ್ದಾರೆ. ಮಹಾರಾಷ್ಟ್ರ ಚುನಾವಣೆ ಆಗುವವರೆಗೆ ಬಾಯಿ ಮುಚ್ಚಿಕೊಂಡಿರಲು ಹೇಳಿದ್ದಾರೆ ಎಂದು ವಿಶ್ಲೇಷಿಸಿದರು.

ಯಾವ ಗ್ಯಾರಂಟಿಗಳೂ ಮಹಾರಾಷ್ಟ್ರ ಚುನಾವಣೆ ಬಳಿಕ ಇರುವುದಿಲ್ಲ ಎಂಬುದೂ ಗ್ಯಾರಂಟಿ ಆಗಿದೆ. ಎಐಸಿಸಿ ಅಧ್ಯಕ್ಷರು, ನಿಮ್ಮ ಬಜೆಟ್ ಗಮನಿಸಿ ಗ್ಯಾರಂಟಿ ಕೊಡಬೇಕಿತ್ತು. ಈಗ ಗುಂಡಿಗಳಿಗೆ ಮಣ್ಣು ಮುಚ್ಚಲೂ ದುಡ್ಡಿಲ್ಲ ಎಂದು ನೇರವಾಗಿ ಒಪ್ಪಿಕೊಂಡಿದ್ದು, ಈ ಕಾಂಗ್ರೆಸ್ ಸರಕಾರದಲ್ಲಿ ದುಡ್ಡಿಲ್ಲ; ಖಜಾನೆ ಖಾಲಿ ಎಂದು ಒಪ್ಪಿಕೊಂಡ ಎಐಸಿಸಿ ಅಧ್ಯಕ್ಷರಿಗೆ ಧನ್ಯವಾದಗಳು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News