ಕನ್ನಡ ಶಾಲೆಗಳಿಗೆ ಸರಕಾರಿ ಆಂಗ್ಲ ಮಾಧ್ಯಮದ ಶಾಲೆಗಳ ವಿರುದ್ಧ ಹೋರಾಡುವ ಸ್ಥಿತಿ : ಪ್ರೊ.ನಿರಂಜನಾರಾಧ್ಯ ವಿ.ಪಿ.
ಬೆಂಗಳೂರು : ಸರಕಾರಿ ಕನ್ನಡ ಶಾಲೆಗಳು ತಮ್ಮ ಉಳಿವಿಗಾಗಿ ತಮ್ಮದೇ ಸರಕಾರಿ ಆಂಗ್ಲ ಮಾಧ್ಯಮದ ಶಾಲೆಗಳ ವಿರುದ್ಧವೇ ಹೋರಾಡಬೇಕಾದ ವಿಪರ್ಯಾಸ ಸೃಷ್ಟಿಯಾಗಿದೆ ಎಂದು ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ ವಿ.ಪಿ. ಕಳವಳ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮತ್ತೊಂದು ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ಸರಕಾರ ತನ್ನದೇ ಆಯ್ದ ಸರಕಾರಿ ಮತ್ತು ಕೆಪಿಎಸ್ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆದು ಸರಕಾರಿ ಕನ್ನಡ ಶಾಲೆಗಳಲ್ಲಿರುವ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೆಳೆಯುತ್ತಿದೆ ಎಂದಿದ್ದಾರೆ.
ಕನ್ನಡ ಶಾಲೆಗಳು ಕನ್ನಡ ಬಾಷೆಯ ತೊಟ್ಟಿಲುಗಳು. ನಮ್ಮ ತಾಯ್ನುಡು ಉಳಿದು ಬೆಳೆದು ಹೆಮ್ಮರವಾಗಿ ಕನ್ನಡಿಗರಿಗೆ ನೆರಳಾಗಬೇಕಾದರೆ, ಸರಕಾರಿ ಕನ್ನಡ ಶಾಲೆಗಳು ಉಳಿಯಬೇಕು. ಆದರೆ ಇಂದು, ಸರಕಾರಿ ಕನ್ನಡ ಶಾಲೆಗಳ ಸ್ಥಿತಿ ಹದಗೆಡುತ್ತಿದೆ ಎಂದು ಅವರು ಹೇಳಿದರು.
6,400 ಸರಕಾರಿ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. 23,342 ಸರಕಾರಿ ಶಾಲೆಗಳಲ್ಲಿ 50 ಅಥವಾ 50ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. 2023-24ರಲ್ಲಿ 3,363 ಮಕ್ಕಳನ್ನು ಆರ್‍ಟಿಇ ಅಡಿಯಲ್ಲಿ ಖಾಸಗಿ ಶಾಲೆಗೆ ದಾಖಲಿಸಲು ಸರಕಾರ 364 ಕೋಟಿ ರೂ. ಖರ್ಚು ಮಾಡಿದೆ. 46,473 ಸರಕಾರಿ ಶಾಲೆಗಳಲ್ಲಿ 42,75,354 ಮಕ್ಕಳು ದಾಖಲಾಗಿದ್ದು, ಸರಕಾರಿ ಶಾಲೆಗಳಲ್ಲಿ ಸರಾಸರಿ 92 ಮಕ್ಕಳು ದಾಖಲಾಗಿದ್ದಾರೆ. 16,299 ಖಾಸಗಿ ಶಾಲೆಗಳಲ್ಲಿ 46,74,481 ಮಕ್ಕಳು ದಾಖಲಾಗಿದ್ದು, ಖಾಸಗಿ ಶಾಲೆಗಳಲ್ಲಿ ಸರಾಸರಿ 287 ಮಕ್ಕಳು ದಾಖಲಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 43,133 ಖಾಲಿ ಇರುವ ಶಿಕ್ಷಕರ ಹುದ್ದೆಗಳಾಗಿದ್ದು, ಸರಕಾರಿ ಪ್ರೌಢ ಶಾಲೆಯಲ್ಲಿ 10,168 ಖಾಲಿ ಇರುವ ಶಿಕ್ಷಕರ ಹುದ್ದೆಯಾಗಿದೆ. ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ 40 ಸಾವಿರ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
2028-29 ರ ವೇಳೆಗೆ ಪ್ರಾಥಮಿಕ ಶಾಲೆಯಲ್ಲಿ 34,807 ಮಂದಿ ನಿವೃತ್ತಿ ಹೊಂದುವ ಶಿಕ್ಷಕರ ಸಂಖ್ಯೆಯಾಗಿದ್ದು, ಇದೇ ವೇಳೆಗೆ ಪ್ರೌಢ ಶಾಲೆಯಲ್ಲಿ 4,128 ಮಂದಿ ಶಿಕ್ಷಕರು ನಿವೃತ್ತಿ ಹೊಂದುತ್ತಿದ್ದಾರೆ ಎಂದು ನಿರಂಜನಾರಾಧ್ಯ ವಿ.ಪಿ. ಮಾಹಿತಿ ನೀಡಿದ್ದಾರೆ.