ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಹಣದುಬ್ಬರ ಹೆಚ್ಚಿಸಿದೆ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Update: 2024-07-28 13:49 GMT

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಹಣದುಬ್ಬರವನ್ನು ಹೆಚ್ಚಿಸಿದೆ. ರಾಷ್ಟ್ರಮಟ್ಟದಲ್ಲಿ ಹಣದುಬ್ಬರದ ಸರಾಸರಿ ಶೇ.5.5ರಷ್ಟಿದ್ದರೆ, ಕರ್ನಾಟಕದಲ್ಲಿ ಅದರ ಪ್ರಮಾಣ ಶೇ.6.1ರಷ್ಟಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕಿಸಿದರು.

ರವಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2022ರ ಜೂನ್ ನಿಂದ 2023ರ ಮೇ ಅವಧಿಯಲ್ಲಿ ರಾಜ್ಯದ ಹಣದುಬ್ಬರ ಶೇ.5.39ರಷ್ಟಿತ್ತು. ಆಗ ರಾಷ್ಟ್ರೀಯ ಸರಾಸರಿ ಶೇ.6ರಷ್ಟಿತ್ತು. ಆದರೆ, ಕಳೆದ ಒಂದು ವರ್ಷದಲ್ಲಿ ಹಣದುಬ್ಬರವು ರಾಷ್ಟ್ರೀಯ ಸರಾಸರಿಯನ್ನು ಮೀರಿದೆ ಎಂದು ಹೇಳಿದರು.

ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಹೆಚ್ಚಳ, ಹಾಲಿನ ದರ ಹೆಚ್ಚಳ, ಆಸ್ತಿ ಮಾರ್ಗಸೂಚಿ ದರ ಏರಿಕೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ರಾಜ್ಯದಲ್ಲಿ ಹಣದುಬ್ಬರದ ಪ್ರಮಾಣ ಏರಿಕೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಉಳಿತಾಯ ಬಜೆಟ್ ಮಂಡನೆಯಾಗಿತ್ತು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆದಾಯ ಕೊರತೆಯ ಬಜೆಟ್ ಆಗಿದೆ. ಸರಕಾರದ ಧೋರಣೆಯಿಂದಾಗಿ ಕೈಗಾರಿಕೆಗಳು ಬೇರೆ ರಾಜ್ಯಗಳತ್ತ ಮುಖ ಮಾಡಲು ಮುಂದಾಗಿವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಆದಾಯದ ಕೊರತೆ ಹೆಚ್ಚಾಗಿದೆ. ಬಂಡವಾಳ ವೆಚ್ಚ ಇಳಿಕೆಯಾಗಿದೆ. ಇದರಿಂದಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯದ ಸಾಲದ ಪ್ರಮಾಣ ಒಂದು ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಸಾಲಗಳನ್ನು ಯಥೇಚ್ಚವಾಗಿ ಮಾಡಿ ಭರವಸೆಗಳನ್ನು ಈಡೇರಿಸುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ದೂರಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ವಿನಿಯೋಗಿಸಬೇಕಾದ ಹಣವನ್ನು ದೋಚಿ ಬೇರೆಕಡೆ ಖರ್ಚು ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಆ ಸಮುದಾಯಗಳಿಗೆ ಕೊಡುತ್ತಿರುವ ನ್ಯಾಯ ಇದೇನಾ? ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಯೂನಿಯನ್ ಬ್ಯಾಂಕ್‍ನ ಅಧಿಕಾರಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಅವರು ತಪ್ಪು ಮಾಡಿದ್ದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಿಜೆಪಿಯವರು ಅಕ್ರಮವಾಗಿ ನಿವೇಶನಗಳನ್ನು ಪಡೆದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ವಿರುದ್ಧ ಕೇಳಿ ಬರುವ ಆರೋಪಗಳಿಗೆ ಮತ್ತೊಂದು ಆರೋಪದ ಮೂಲಕ ಉತ್ತರಿಸುವುದು ಕಾಂಗ್ರೆಸ್‍ನವರಿಗೆ ಅಭ್ಯಾಸವಾಗಿಬಿಟ್ಟಿದೆ. ಅದನ್ನು ಬಿಟ್ಟು ಮುಖ್ಯಮಂತ್ರಿ ತಾನು ಅಕ್ರಮ ನಿವೇಶನ ಪಡೆದುಕೊಂಡಿರುವುದಾಗಿ ಒಪ್ಪಿಕೊಳ್ಳಲಿ ಎಂದು ಹೇಳಿದರು.

ಈಡಿಯವರು ತಮ್ಮ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರಿಗೆ ಬೇಸರವಾಗುತ್ತದೆ ಎಂದು ಅವರು ತಮ್ಮ ಕರ್ತವ್ಯವನ್ನು ಮರೆಯಲು ಆಗುತ್ತದೆಯೇ? ನಮ್ಮ ಸರಕಾರ ಅವರಿಗೆ ಸ್ವಾತಂತ್ರ್ಯ ನೀಡಿದೆ. ಕಪ್ಪು ಹಣ, ಅಕ್ರಮ ವ್ಯವಹಾರಗಳನ್ನು ಈಡಿಯವರು ಪತ್ತೆ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News