‘ಮಲೆಯಾಳಿ ಕನ್ನಡ ಸಾಹಿತ್ಯ ಸಮ್ಮೇಳನ’ ನಡೆಸಲು ಸ್ಪೀಕರ್ ಯು.ಟಿ.ಖಾದರ್ ಸಲಹೆ

Update: 2024-07-25 15:46 GMT

ಬೆಂಗಳೂರು : ಕನ್ನಡ ಮತ್ತು ಮಲೆಯಾಳಿ ಭಾಷೆಗಳ ಬಾಂಧವ್ಯ ಬೆಸೆಯಲು ಕೇರಳ ಗಡಿ ಭಾಗದಲ್ಲಿ ಕನ್ನಡ-ಮಲೆಯಾಳಿ ಸಾಹಿತ್ಯ ಸಮ್ಮೇಳನವನ್ನು ಆಚರಿಸಲು ಸರಕಾರ ಕ್ರಮಕೈಗೊಳ್ಳಬೇಕು ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿದ್ದ ‘ಮಲೆಯಾಳಿ ಭಾಷಿಕರಿಗೆ ಕನ್ನಡ ಕಲಿಕಾ ತರಗತಿ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ-ಮಲೆಯಾಳಿ ಸಾಹಿತ್ಯ ಸಮ್ಮೇಳನ ಆಯೋಜನೆಯಾಗಬೇಕು. ಇದರ ಮೂಲಕ ಮಲೆಯಾಳಿಗಳು ಹಾಗೂ ಕನ್ನಡಿಗರು ತಮ್ಮ ಭಾಷೆ ಪ್ರೇಮದ ಜೊತೆಗೆ ಸಾಹಿತ್ಯದ ಸಂಭ್ರಮವನ್ನು ಸವಿಯಲು ಸಾಧ್ಯವಾಗುತ್ತದೆ ಎಂದರು.

ಭಾಷೆ ಯಾವುದೇ ಇರಲಿ ಅದಕ್ಕೆ ತನ್ನದೇ ಆದ ಬಲ ಇರುತ್ತದೆ. ಒಂದು ಸಮಾಜದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ ಬೆಳೆಯುವುದೇ ಅದರ ಭಾಷೆಯಿಂದ ಭಾಷೆ ಬಲಿಷ್ಠವಾದರೆ, ಸಮಾಜವು ಬಲಿಷ್ಠವಾಗುತ್ತದೆ. ನೀವು ಎಷ್ಟು ಹೆಚ್ಚು ಭಾಷೆಗಳನ್ನು ಕಲಿಯುತ್ತೀರೋ ಅಷ್ಟು ಆತ್ಮವಿಶ್ವಾಸ ಹೆಚ್ಚುತ್ತದೆ. ಕೇರಳದಲ್ಲಿ ಮಲೆಯಾಳಿ ಭಾಷೆ೪ಯನ್ನು ಪ್ರೀತಿಸುವಷ್ಟೇ, ಕರ್ನಾಟಕದಲ್ಲಿ ಕನ್ನಡವನ್ನು ಪ್ರೀತಿಸಿ, ಕನ್ನಡ ಕಲಿಯುವ ಮೂಲಕ ಸೌಹಾರ್ದತೆಯನ್ನು ಬೆಳೆಸಿ ಎಂದು ಅವರು ಕರೆನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಸಭಾಧ್ಯಕ್ಷರ ಸಲಹೆಯಂತೆ ಮುಂಬರುವ ದಿನಗಳಲ್ಲಿ ಕನ್ನಡ-ಮಲೆಯಾಳಿ ಸಾಹಿತ್ಯ ಸಮ್ಮೇಳನವನ್ನು ಆಚರಿಸಲು ಕ್ರಮ ವಹಿಸಲಾಗುತ್ತದೆ. ಕನ್ನಡ ಮತ್ತು ಮಲೆಯಾಳಿ ಭಾಷೆಗಳ ನಡುವೆ ಉತ್ತಮ ಬಾಂಧವ್ಯವಿದೆ. ಕೇರಳದ ಮಹಾತ್ಮರೆನಿಸಿದ ನಾರಾಯಣ ಗುರುಗಳ ಜಯಂತಿಯನ್ನು ಕರ್ನಾಟಕ ಸರಕಾರ ಆಚರಿಸುತ್ತಿದೆ ಎಂದರು.

ಮಲೆಯಾಳಿ ಸಾಹಿತ್ಯದ ಅನೇಕ ಕೃತಿಗಳು ಕುವೆಂಪು ಭಾಷಾಭಾರತಿ ಪ್ರಾಧಿಕಾರದಿಂದ ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾಗಿವೆ. ನಾರಾಯಣ ಗುರುಗಳ ಸಾಹಿತ್ಯವನ್ನು ಕನ್ನಡ ಭಾಷೆಯಲ್ಲಿ ಅನುವಾದ ಮಾಡಿ ಪ್ರಕಟಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಭಾಷೆ-ಭಾಷೆಗಳ ನಡುವೆ ಜಗಳ ಆಗುವುದು ಸರಿಯಲ್ಲ. ಎಲ್ಲ ಭಾಷಿಕರು ಸೌಹಾರ್ದದಿಂದ ಬದುಕುವುದು ಕಲಿಯಬೇಕು. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಡಾ.ಪುರುಷೋತ್ತಮ ಬಿಳಿಮಲೆ ಅವರ ಅಧ್ಯಕ್ಷತೆಯಲ್ಲಿ ಒಳ್ಳೆಯ ಒಳ್ಳೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೂಪಿಸುತ್ತಿದೆ. ಇದಕ್ಕೆ ಸರಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಯೋಜನೆಯನ್ನು ಹಾಕಿಕೊಂಡಿದೆ. ಭಾರತದ ಒಕ್ಕೂಟ ವ್ಯವಸ್ಥೆ ಬಲಿಷ್ಠವಾಗಿ ಉಳಿಯಬೇಕಾದರೆ ನಾವು ನಮ್ಮ ರಾಜ್ಯದ ಭಾಷೆಯನ್ನು ಕಲಿಯಬೇಕು, ನಾವು ಯಾವು ರಾಜ್ಯದಲ್ಲಿದ್ದರೆ ಆ ರಾಜ್ಯದ ಭಾಷೆ ಕಲಿಯಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಕನ್ನಡ-ಮಲೆಯಾಳಂ ಅನುವಾದಕ ಸುಧಾಕರನ್ ರಾಮಂತಳ್ಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ, ಮಲೆಯಾಳಂ ಮಿಷನ್‍ನ ಸಂಚಾಲಕ ಟಾಮಿ ಜೆ ಅಲುಂಕಲ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News