ವಾಲ್ಮೀಕಿ ನಿಗಮದ ಹಗರಣ | ಚಾರ್ಜ್‌ಶೀಟ್ ಸಲ್ಲಿಸಿದ ಈ.ಡಿ : ನಾಗೇಂದ್ರ ಸಹಿತ 24 ಮಂದಿ ಹೆಸರು ಉಲ್ಲೇಖ

Update: 2024-09-11 09:21 GMT

ನಾಗೇಂದ್ರ

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಈ.ಡಿ.) ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ಚಾರ್ಜ್‌ಶೀಟ್ ಸಲ್ಲಿಸಿದೆ.

ಇತ್ತೀಚೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ ಹೆಸರು ಇರಲಿಲ್ಲ. ಆದರೆ, ಈಗ ಈ.ಡಿ. ಸಲ್ಲಿಸಿರುವ ಚಾರ್ಜ್‌ ಶೀಟ್‌ನಲ್ಲಿ ಬಿ.ನಾಗೇಂದ್ರ ಹಾಗೂ ಹೈದರಾಬಾದ್ ಫಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷ ಸತ್ಯನಾರಾಯಣ ವರ್ಮಾ ಅವರನ್ನು ಜಂಟಿ ಪ್ರಥಮ ಆರೋಪಿಗಳನ್ನಾಗಿ ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

5,114 ಪುಟಗಳ ಚಾರ್ಜ್‌ ಶೀಟ್‌ ನಲ್ಲಿ ನಾಗೇಂದ್ರ ಸೇರಿದಂತೆ 24 ಮಂದಿ ವಿರುದ್ದ ಆರೋಪ ಹೊರಿಸಲಾಗಿದೆ. ಪ್ರಕರಣದ ಸಂಬಂಧ ಮಾಜಿ ಸಚಿವರನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ನಿಗಮದ ಕೋಟ್ಯಂತರ ರೂ.ಅನ್ನು ತೆಲಂಗಾಣ ಲೋಕಸಭಾ ಚುನಾವಣೆಯಲ್ಲಿ ಮದ್ಯ ಖರೀದಿಗೆ ವಿನಿಯೋಗಿಸಲಾಗಿದೆ ಎಂದು ಚಾರ್ಜ್‌ಟ್‌ನಲ್ಲಿ ನಮೂದಿಸಿರುವುದಾಗಿ ತಿಳಿದುಬಂದಿದೆ.

ಈ ಪ್ರಕರಣದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ವಿರುದ್ಧ ಆರೋಪ ಕೇಳಿ ಬಂದಿತ್ತು. ಈ ಕುರಿತು ಈ.ಡಿ. ಕೂಡ ವಿಚಾರಣೆ ನಡೆಸಿದ್ದು, ತನಿಖೆಯಲ್ಲಿ ಬಸನಗೌಡ ದದ್ದಲ್ ಪಾತ್ರದ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ಲಭಿಸದ ಕಾರಣ ಚಾರ್ಜ್‌ ಶೀಟ್‌ನಲ್ಲಿ ಅವರ ಹೆಸರು ಉಲ್ಲೇಖಿಸಿಲ್ಲ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News