ಮೈದಾನ ಪ್ರವೇಶಿಸಿದ್ದ ವಿರಾಟ್ ಕೊಹ್ಲಿ ಅಭಿಮಾನಿಗೆ ಥಳಿತ ಆರೋಪ: ಮಾನವ ಹಕ್ಕುಗಳ ಆಯೋಗಕ್ಕೆ ದೂರು
ಬೆಂಗಳೂರು : ಆರ್‌ಸಿಬಿ ಮತ್ತು ಪಂಜಾಬ್ ನಡುವಿನ ಐಪಿಎಲ್ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮಾರ್ಚ್ 25ರಂದು ಅತಿಕ್ರಮ ಪ್ರವೇಶಿಸಿದ್ದ ವಿರಾಟ್ ಕೊಹ್ಲಿ ಅಭಿಮಾನಿಯಾಗಿರುವ ಯುವಕನಿಗೆ ಥಳಿಸಿರುವ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಮಾಲಿ ಪಾಟೀಲ್ ಎಂಬುವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಪಂದ್ಯ ನಡೆಯುವಾಗ ಮೈದಾನಕ್ಕೆ ಪ್ರವೇಶಿಸಿ ಬ್ಯಾಟಿಂಗ್‍ಗೆ ಬರುತ್ತಿದ್ದ ವಿರಾಟ್ ಕೊಹ್ಲಿ ಕಾಲಿಗೆ ನಮಸ್ಕರಿಸಿದ್ದ ರಾಯಚೂರು ಮೂಲದ ಅಭಿಮಾನಿಯನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದರು. ಬಂಧನಕ್ಕೂ ಮುನ್ನ ಮೈದಾನದಿಂದ ಆತನನ್ನು ಹೊರ ಕರೆದುಕೊಂಡು ಸಾವಿರಾರು ಜನರ ಮುಂದೆ ಮನಸೋ ಇಚ್ಛೆ ಥಳಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು.
ಹಿಗ್ಗಾಮುಗ್ಗಾ ಥಳಿಸಿರುವ ಬಗ್ಗೆ ಪ್ರಶ್ನಿಸಿ ಆ ಯುವಕ ಭದ್ರತಾ ನಿಯಮ ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿರುವುದು ಅಪರಾಧ. ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳಬೇಕು. ಆದರೆ, ಸಾವಿರಾರು ಜನರ ಮುಂದೆ ಥಳಿಸಿರುವುದು ಸರಿಯಲ್ಲ. ಮನಸೋಇಚ್ಛೆ ಥಳಿಸಲು ಅಧಿಕಾರ ನೀಡಿದವರು ಯಾರು ಎಂದು ಮರಿಲಿಂಗೇಗೌಡ ಮಾಲಿ ಪಾಟೀಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ಸಂಬಂಧ ಭದ್ರತೆ ಉಸ್ತುವಾರಿ ವಹಿಸಿಕೊಂಡ ಸಂಸ್ಥೆ, ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‍ಸಿಎ), ಅಧ್ಯಕ್ಷರು, ಕಾರ್ಯದರ್ಶಿ, ಗ್ರೌಂಡ್ ಇನ್‍ಚಾರ್ಜ್ ಹಾಗೂ ಪೊಲೀಸರನ್ನು ವಿಚಾರಣೆ ನಡೆಸಬೇಕು. ಸಾವಿರಾರು ಜನರ ಮುಂದೆ ಯುವಕನನ್ನು ಥಳಿಸಿರುವ ಅನಾಮಧೇಯ ವ್ಯಕ್ತಿಗಳು ಯಾರು, ಹಲ್ಲೆಗೊಳಗಾದ ಯುವಕನಿಗೆ ಕೆಎಸ್‍ಸಿಎ ವತಿಯಿಂದ ವೈದ್ಯಕೀಯ ಚಿಕಿತ್ಸೆ ನೀಡಿದ್ದಾರೆಯೇ ಎಂಬುವುದು ಸೇರಿದಂತೆ ಸಮಗ್ರ ತನಿಖೆ ನಡೆಸಬೇಕು ಎಂದು ಮರಿಲಿಂಗೇಗೌಡ ಮಾಲಿ ಪಾಟೀಲ್ ದೂರಿನಲ್ಲಿ ಒತ್ತಾಯಿಸಿದ್ದಾರೆ.