ಕುಂಬಾರರ ಸಹಕಾರ ಸಂಘದ ಗೇಣಿ ಹಕ್ಕು ಮರು ಮಂಜೂರು ಪರಿಗಣಿಸುತ್ತೇವೆ: ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು : ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಗೇಣಿ ಹಕ್ಕನ್ನು ಮರು ಮಂಜೂರು ಮಾಡುವ ನಿಟ್ಟಿನಲ್ಲಿ, ಪುನಃ ಮನವಿ ಸಲ್ಲಿಸಿದರೆ ರಾಜ್ಯ ಸರಕಾರವು ಸಕಾರಾತ್ಮಕವಾಗಿ ಪರಿಗಣಿಸಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಉಮಾನಾಥ ಎ.ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲೆಯ ತೋಕೂರು ಗ್ರಾಮದ ಸರ್ವೆ ನಂ.70ರಲ್ಲಿರುವ 7.08 ಎಕರೆ ಪ್ರದೇಶದಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಗೇಣಿ ಹಕ್ಕನ್ನು ಮಂಜೂರು ಮಾಡುವ ಕುರಿತು ಗಮನ ಸೆಳೆದ ಸೂಚನೆಗೆ ಅವರು ಉತ್ತರಿಸಿದರು.
ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ 1995ರಲ್ಲಿ ಈ ಜಮೀನು ಗೇಣಿಗೆ ನೀಡಲಾಗಿದೆ. 2010ರಲ್ಲಿ ಗೇಣಿ ರದ್ದಾಗಿದೆ. ಷರತ್ತು ಉಲ್ಲಂಘನೆ ಎನ್ನುವ ಕಾರಣಕ್ಕೆ ಪ್ರಕರಣ ಕೆಎಟಿಯಲ್ಲಿ ತೀರ್ಮಾನವಾಗಿ ಜಮೀನು ವಾಪಸ್ ಪಡೆಯುವಂತೆ ಆದೇಶವಾಗಿದೆ. ಅದರಂತೆ ಜಿಲ್ಲಾಡಳಿತ ಜಮೀನು ಹಿಂಪಡೆದಿದೆ. ಗೇಣಿ ರದ್ದಾಗಿ 14 ವರ್ಷ ಆಗಿದೆ. ಪುನಃ ಅವರಿಗೆ ಅದೇ ಭೂಮಿ ನೀಡುವುದು ಕೆಎಟಿ ಆದೇಶಕ್ಕೆ ವಿರುದ್ಧವಾಗಲಿದೆ ಎಂದು ಅವರು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್, ಕುಂಬಾರ ಸಮುದಾಯದವರು ಬಹಳ ಮುಗ್ಧರು. ಅವರ ಪರಂಪರಾಗತ ಕುಲಕಸುಬು ಉಳಿಸುವುದಕ್ಕೆ ಅವರಿಗೆ ಸಹಕಾರ ನೀಡಬೇಕು. ಒಂದು ವೇಳೆ ಆ ಜಾಗ ನೀಡಲು ಸಾಧ್ಯವಿಲ್ಲದಿದ್ದರೆ, ನನ್ನ ಕ್ಷೇತ್ರದಲ್ಲಿ ಜಾಗ ಗುರುತಿಸಿ ಕಳುಹಿಸುತ್ತೇವೆ ಎಂದರು.
ನಗರ ಪಂಚಾಯಿತಿ ವ್ಯಾಪ್ತಿಯ ಮೂರು ಕಿ.ಮೀ. ಒಳಗಡೆ ಆ ಪ್ರದೇಶ ಇರುವುದರಿಂದ ಈಗ ಮಂಜೂರು ಮಾಡಲು ಸಾಧ್ಯವಿಲ್ಲ. ಬೇರೆ ಜಾಗ ಗುರುತಿಸಿಕೊಟ್ಟರೆ ಖಂಡಿತವಾಗಿಯೂ ಸರಕಾರ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಪರಿಗಣಿಸಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.