7.85 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ : ಸಚಿವ ಝಮೀರ್ ಅಹ್ಮದ್

Update: 2025-02-12 21:30 IST
7.85 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ : ಸಚಿವ ಝಮೀರ್ ಅಹ್ಮದ್
  • whatsapp icon

ಬೆಂಗಳೂರು : ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ 7.85 ಲಕ್ಷ ವಿದ್ಯಾರ್ಥಿಗಳಿಗೆ 290ಕೋಟಿ ರೂ.ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಈಗಾಗಲೇ 6.25 ಲಕ್ಷ ವಿದ್ಯಾರ್ಥಿಗಳಿಗೆ ಡಿಬಿಟಿ ಮೂಲಕ 180 ಕೋಟಿ ರೂ. ವರ್ಗಾವಣೆ ಮಾಡಲಾಗಿದ್ದು, 1.60 ಲಕ್ಷ ವಿದ್ಯಾರ್ಥಿಗಳಿಗೆ 100 ಕೋಟಿ ರೂ. ಅನುದಾನ ಅಗತ್ಯ ಇರುವ ಬಗ್ಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ವಿದ್ಯಾಸಿರಿ ಯೋಜನೆಯಡಿಯಲ್ಲಿ ಜನವರಿ ಅಂತ್ಯದವರೆಗೆ ಹಾಸ್ಟೆಲ್‍ಗಳಲ್ಲಿ 23 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದ್ದು, ಹಾಸ್ಟೆಲ್‍ನಲ್ಲಿ ಪ್ರವೇಶ ಸಿಗದ 5753 ವಿದ್ಯಾರ್ಥಿಗಳಿಗೆ ಮಾಸಿಕ 1500ರೂ.ನಂತೆ ಹತ್ತು ತಿಂಗಳ ಮೊತ್ತ 15ಸಾವಿರ ರೂ. ವರ್ಗಾವಣೆ ಮಾಡಲಾಗಿದೆ. ಅದಕ್ಕಾಗಿ 8.63 ಕೋಟಿ ರೂ.ವೆಚ್ಚ ಮಾಡಲಾಗಿದೆ.

ಇನ್ನು 200 ವಿದ್ಯಾರ್ಥಿಗಳ ಆಧಾರ್ ಲಿಂಕ್ ಸಮಸ್ಯೆ ಇದ್ದು ಅದು ಸರಿ ಹೋದ ನಂತರ ಅವರಿಗೂ ಹಣ ವರ್ಗಾವಣೆ ಆಗಲಿದ್ದು, ಶೇ.100ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದಂತಾಗಲಿದೆ. ನಿರ್ದೇಶನಾಲಯಕ್ಕೆ ಪ್ರಸಕ್ತ ವರ್ಷ 2,292ಕೋಟಿ ರೂ. ನಿಗದಿಯಾಗಿ 1,941 ಕೋಟಿ ರೂ. ಬಿಡುಗಡೆಯಗಿದ್ದು ಅದರಲ್ಲಿ 1,608ಕೋಟಿ ರೂ. ವೆಚ್ಚ ಮಾಡಲಾಗಿದ್ದು ಶೇ.83ರಷ್ಟು ಖರ್ಚು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 7500 ವಿದ್ಯಾರ್ಥಿಗಳಿಗೆ ಅರಿವು ಯೋಜನೆ ಹಾಗೂ ವಿದೇಶಿ ವಿದ್ಯಾಭ್ಯಾಸ ನೆರವು ಯೋಜನೆಯಡಿಯಲ್ಲಿ 92.50 ಕೋಟಿ ರೂ. ಸಾಲ ವಿತರಿಸಲಾಗಿದೆ. ಇದೇ ರೀತಿ ವಕ್ಫ್ ಬೋರ್ಡ್‍ಗೆ 157ಕೋಟಿ ರೂ.ಅನುದಾನ ಬಿಡುಗಡೆ ಯಾಗಿದ್ದು 125ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News