ಉತ್ತರ ಕರ್ನಾಟಕ ಭಾಗದಲ್ಲಿ ಶೇ.80ರಷ್ಟು ಹುದ್ದೆಗಳು ಖಾಲಿ : ಬಿ.ಆರ್.ಪಾಟೀಲ್ ಅಸಮಾಧಾನ
ಬೆಳಗಾವಿ(ಸುವರ್ಣ ವಿಧಾನಸೌಧ) : ಉತ್ತರ ಕರ್ನಾಟಕ ಭಾಗದಲ್ಲಿ ಶೇ.80ರಷ್ಟು ಹುದ್ದೆಗಳು ಖಾಲಿಯಿವೆ. ಸರಕಾರಿ ಶಾಲೆ, ಕಾಲೇಜುಗಳಲ್ಲಿ 40 ಸಾವಿರ ಹುದ್ದೆಗಳು ಖಾಲಿಯಿವೆ. ಸರಕಾರಿ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಬಿ.ಆರ್.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ಮೂಲಸೌಕರ್ಯಗಳ ಕೊರತೆಯಿಂದಾಗಿ ಶಾಲಾ ದಾಖಲಾತಿ ಪ್ರಮಾಣ ಕುಸಿದಿದೆ. ಬಡವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವಂತಾಗಿದೆ. ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕ ಮಾಡುವುದರಿಂದ ಅವರಲ್ಲಿ ಉತ್ತರಾಯಿತ್ವ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಶೇ.83ರಷ್ಟು ಹುದ್ದೆಗಳು ಖಾಲಿಯಿವೆ. ನಮ್ಮ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದು ಹೋಗುತ್ತಿದೆ. ಮಹಾರಾಷ್ಟ್ರದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಕೈಗೊಂಡಿರುವ ಮಾದರಿಯನ್ನು ನಮ್ಮಲ್ಲಿಯೂ ಅಳವಡಿಸಿಕೊಳ್ಳಬೇಕು. ಅರಣ್ಯ ಪ್ರದೇಶ ಕಡಿಮೆಯಾಗುತ್ತಿರುವುದರಿಂದ ಬಿಸಿಲಿನ ತಾಪ ಮಾನವು ಹೆಚ್ಚಾಗುತ್ತಿದೆ ಎಂದು ಬಿ.ಆರ್.ಪಾಟೀಲ್ ತಿಳಿಸಿದರು.
ಕಲಬುರಗಿಯಲ್ಲಿ ಶೇ.6, ಆಳಂದದಲ್ಲಿ ಶೇ.1ರಷ್ಟು ಮಾತ್ರ ಅರಣ್ಯವಿದೆ. ಆದುದರಿಂದ, ಸರಕಾರ ಭೂ ಸುಧಾರಣಾ ಕಾಯ್ದೆಯಲ್ಲಿ ಇಂತಿಷ್ಟು ಭೂಮಿ ಅರಣ್ಯಕ್ಕೆ ಮೀಸಲಿಡಬೇಕು ಎಂದು ನಿಯಮ ರೂಪಿಸಬೇಕು. ಹಳ್ಳಿಗಳಲ್ಲಿ ರಸ್ತೆಗಳ ಸುಧಾರಣೆ ಆಗಬೇಕು. ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ ಸಚಿವಾಲಯ ಸ್ಥಾಪನೆ ಮಾಡುವ ಘೋಷಣೆ ಮಾಡಲಾಗಿತ್ತು. ಆದರೆ, ಈವರೆಗೆ ಅದು ಜಾರಿಯಾಗಿಲ್ಲ ಎಂದು ಅವರು ಹೇಳಿದರು.
ಬಜೆಟ್‍ನಲ್ಲಿ ‘ಬೀದರ್-ಕಲಬುರಗಿ-ರಾಯಚೂರು-ಬಳ್ಳಾರಿ-ಬೆಂಗಳೂರು’ ಕಾರಿಡಾರ್ ರಸ್ತೆ ಮಾಡುವುದಾಗಿ ಘೋಷಿಸಿದ್ದರು. ಆದರೆ, ಈ ರಸ್ತೆಯನ್ನು ಯಾರು ಮಾಡುತ್ತಿದ್ದಾರೆ. ಯಾವ ಇಲಾಖೆಯಿಂದ ಅನುಷ್ಠಾನಗೊಳ್ಳಲಿದೆ ಎಂಬ ಮಾಹಿತಿಯೇ ಇಲ್ಲ. ಸರಕಾರ ನಮಗೆ ಬೀದರ್ ಇಂದ ಬೆಂಗಳೂರಿನ ವರೆಗೆ ಸಂಚರಿಸಲು ನಾಲ್ಕು ಪಥದ ರಸ್ತೆಯನ್ನು ನಿರ್ಮಿಸಿಕೊಡಬೇಕು ಎಂದು ಅವರು ಕೋರಿದರು.