50 ಗ್ರಾ.ಪಂ.ಗಳನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆರಿಸಲು ಕ್ರಮ : ಸಚಿವ ಭೈರತಿ ಸುರೇಶ್

Update: 2024-12-13 10:59 GMT

ಬೆಳಗಾವಿ : ರಾಜ್ಯದಲ್ಲಿ 50ಕ್ಕೂ ಗ್ರಾಮ ಪಂಚಾಯ್ತಿಗಳನ್ನು ಪಟ್ಟಣ ಪಂಚಾಯಿ ಹಾಗೂ ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದ್ದು, ಹಂತ-ಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ಭರವಸೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ದಿನಕರ್ ಶೆಟ್ಟಿ ಕೇಳಿದ ಪ್ರಶ್ನೆಗೆ ಪೌರಾಡಳಿತ ಸಚಿವ ರಹೀಮ್ ಖಾನ್ ಉತ್ತರ ನೀಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಅವರು, 2011ರ ಜನಗಣತಿ ಪ್ರಕಾರ ಮೇಲ್ದರ್ಜೆಗೇರಿಸಲು ಅವಕಾಶವಿಲ್ಲ. ಆದರೆ ಗೋಕರ್ಣಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಗೋಕರ್ಣದ ಬಗ್ಗೆ ನಮಗೂ ವಿಶೇಷವಾದ ಪ್ರೀತಿ ಇದೆ. ಆದರೆ, ರಾಜ್ಯದಲ್ಲಿ ಗ್ರಾ.ಪಂ.ಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು ರಾಜ್ಯಾದ್ಯಂತ ಒಂದೇ ಮಾನದಂಡವಿದೆ ಎಂದು ವಿವರಿಸಿದರು.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಗ್ರಾ.ಪಂ.ಅನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮೊದಲ ಆದ್ಯತೆಯಲ್ಲೇ ಮೇಲ್ದದರ್ಜೆ ಗೇರಿಸಲು ಗಮನ ಕೊಡಲಾಗುವುದು. 2011ರ ಜನಗಣತಿಯ ಪ್ರಕಾರ ಗೋಕರ್ಣ ಜನಸಂಖ್ಯೆ 13,539 ಜನಸಂಖ್ಯೆ ಇದೆ. 2015ರ ಮಾರ್ಚ್ 19ರ ಸಚಿವ ಸಂಪುಟದಲ್ಲಿ 15ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಅರ್ಹ ಗ್ರಾ.ಪಂ.ಗಳನ್ನು ಮಾತ್ರ ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಗೋಕರ್ಣ ಗ್ರಾಪಂ ನಿಗದಿತ ಮಾನದಂಡವನ್ನು ಪೂರೈಸುತ್ತಿಲ್ಲ ಎಂದು ರಹೀಂ ಖಾನ್ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ವಿಜಯೇಂದ್ರ, ಜನಗಣತಿ ಮಾನದಂಡವೆಂದು ಪರಿಗಣಿಸಿದರೆ ಗೋಕರ್ಣವನ್ನು ಮೇಲ್ದರ್ಜೆಗೇರಿಸಲು ಸಾಧ್ಯವಿದೆ. ಲಕ್ಷಾಂತರ ಜನ ಇಲ್ಲಿಗೆ ನಿತ್ಯ ಬರುವ ಪ್ರೇಕ್ಷಣೀಯ ಸ್ಥಳ, ಸರಕಾರ ಆದ್ಯತೆ ಮೇಲೆ ಪರಿಗಣಿಸಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ಮತ್ತೋರ್ವ ಸದಸ್ಯ ಸುನೀಲ್ ಕುಮಾರ್, ‘ಪ್ರವಾಸಿಗರು ಹೆಚ್ಚು ಆಗಮಿಸುವ ಪ್ರವಾಸಿ ತಾಣಗಳನ್ನು ಮೇಲ್ದರ್ಜೆಗೇರಿಸಲು ಆದ್ಯತೆ ನೀಡಿದರೆ ಸರಕಾರಕ್ಕೂ ಗೌರವ ಬರುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News