ಬೆಳಗಾವಿ | ʼಜೀವ ವಿಮಾʼ ಹಣ ಪಡೆಯಲು ಅಣ್ಣನ ಜೀವ ತೆಗೆದ ತಮ್ಮ!
ಬೆಳಗಾವಿ : ಇಲ್ಲಿನ ಮೂಡಲಗಿ ತಾಲ್ಲೂಕಿನ ಕಲ್ಲೋಳಿಯಲ್ಲಿ ಜೀವ ವಿಮೆಯ 50 ಲಕ್ಷ ರೂ. ಹಣಕ್ಕಾಗಿ ಸ್ವಂತ ಅಣ್ಣನ್ನೇ ತಮ್ಮ ಸಹಚರರೊಂದಿಗೆ ಸೇರಿ ಕೊಲೆ ಮಾಡಿದ ಪ್ರಕರಣವನ್ನು ಘಟಪ್ರಭಾ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಕಲ್ಲೋಳಿಯ ಹನುಮಂತ ಗೋಪಾಲ ತಳವಾರ (35) ಹತ್ಯೆಯಾದ ಅಣ್ಣ. ಇವರ ತಮ್ಮ ಬಸವರಾಜ ತಳವಾರ, ಸಹಚರರಾದ ಬಾಪು ಶೇಖ್, ಈರಪ್ಪ ಹಡಗಿನಾಳ ಮತ್ತು ಸಚಿನ ಕಂಟೆನ್ನವರ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?
ʼನ.7ರಂದು ಮೂಡಲಗಿ– ಕಲ್ಲೋಳಿ ರಸ್ತೆಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದಾಗ, ಇದು ಸಹಜ ಸಾವಲ್ಲ ಎಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದರು. ಇದು ಹನುಮಂತ ಅವರ ಮೃತದೇಹವೆಂದು ಬಳಿಕ ಗೊತ್ತಾಯಿತು. ಈ ಸಂಬಂಧ ಕೆಲವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ, ಭಿನ್ನವಾದ ಹೇಳಿಕೆ ಕೊಟ್ಟರು. ಬಳಿಕ ವಿಚಾರಣೆ ತೀವ್ರಗೊಳಿಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಹನುಮಂತ ಅವರ ಹೆಸರಿನಲ್ಲಿ ಬಸವರಾಜ 50 ಲಕ್ಷ ಮೊತ್ತದ ಜೀವವಿಮೆ ಪಾಲಸಿಯನ್ನು ಒಂದು ವರ್ಷದ ಹಿಂದೆ ಮಾಡಿದ್ದನು. ಆ ಪಾಲಸಿಗೆ ತಮ್ಮನೇ ನಾಮಿನಿ ಆಗಿದ್ದರು. ಅಣ್ಣನ ಹತ್ಯೆ ಮಾಡಿ ಆ ಹಣ ಪಡೆಯಲು ಸಂಚು ರೂಪಿಸಿದರು. ಹನುಮಂತ ಅವರಿಗೆ ಮದ್ಯ ಕುಡಿಸಿ, ಶ್ರೀಗಂಧದ ಕಟ್ಟಿಗೆ ತರೋಣ ಎಂದು ಕರೆದೊಯ್ದಿದ್ದರು. ಅಲ್ಲಿ ತಲೆಗೆ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದಾರೆʼ ಎಂದು ತಿಳಿಸಿದರು.