ಬೆಳಗಾವಿ | ಅಗ್ನಿ ದುರಂತದಲ್ಲಿ ಮಡಿದ ಮಗನ ಮೃತದೇಹದ ಅವಶೇಷಗಳನ್ನು ಕೈಚೀಲದಲ್ಲಿ ಹಾಕಿ ತಂದೆಗೆ ನೀಡಿದರು!

Update: 2024-08-07 17:23 GMT

ಬೆಳಗಾವಿ : ಸ್ನೇಹಂ ಟಿಕ್ಸೊ ಟೇಪ್ ಕಾರ್ಖಾನೆಯಲ್ಲಿ ಕಳೆದ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ (20) ಅವರ ಮೃತದೇಹದ ಅವಶೇಷಗಳನ್ನು ಅಧಿಕಾರಿಗಳು ಕೈಚೀಲದಲ್ಲಿ ಹಾಕಿ ತಂದೆ ಸಣ್ಣಗೌಡ ಅವರ ಕೈಗೆ ಕೊಟ್ಟಿರುವ ಘಟನೆ ನಡೆದಿದೆ.

ಕಾರ್ಖಾನೆಯ ಲಿಫ್ಟ್‌ನಲ್ಲೇ ಸಿಕ್ಕಿ ಮೃತಪಟ್ಟಿರುವ ಯುವಕನಿಗೆ ಕನಿಷ್ಠ ಮಟ್ಟದ ಗೌರವ ನೀಡದ ಹಾಗೂ ಮೃತದೇಹ ಸಾಗಾಣೆಗೆ ವಾಹನ ವ್ಯವಸ್ಥೆ ಮಾಡದ ಬೆಳಗಾವಿ ಜಿಲ್ಲಾಡಳಿತದ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಯಲ್ಲಪ್ಪ ಅವರ ಮೃತದೇಹದ ಅವಶೇಷಗಳನ್ನು ಕೈಚೀಲದಲ್ಲಿ ತುಂಬಿಸಿ ಅವರ ತಂದೆ ಸಣ್ಣಗೌಡ ಅವರಿಗೆ ಹಸ್ತಾಂತರಿಸಲಾಗಿದೆ. ಸಂತೆಗೆ ಬಳಸುವ ಕೈಚೀಲದಲ್ಲಿ ಸಣ್ಣಗೌಡ ತನ್ನ ಮಗನ ಶವದ ಅವಶೇಷಗಳನ್ನು ತೆಗೆದುಕೊಂಡು ಹೋಗುವಾಗ, ಅವರ ದುಃಖ ಉಮ್ಮಳಿಸಿ ಬರುತ್ತಿತ್ತು. ಅವರ ಪರಿಸ್ಥಿತಿ ಕಂಡು ಹಲವರು ಮರುಗಿದರು.

ನಾವಗೆ ಗ್ರಾಮದ ಹೊರ ವಲಯದಲ್ಲಿರುವ ಟೇಪ್ ಕಾರ್ಖಾನೆಯಲ್ಲಿ ಆ.6ರಂದು ಸಂಭವಿಸಿದ ಭಾರೀ ಪ್ರಮಾಣದ ಬೆಂಕಿ ಅವಘಡದಲ್ಲಿ ಯಲ್ಲಪ್ಪ ಮೃತಪಟ್ಟು, ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಯಲ್ಲಪ್ಪ ಅವರ ಮೃತದೇಹ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಲಿಫ್ಟ್ ನಲ್ಲಿ ಪತ್ತೆಯಾಗಿತ್ತು. ಕೆಲವು ಎಲುಬುಗಳು ಮಾತ್ರ ಪತ್ತೆಯಾಗಿತ್ತು.

ಸಣ್ಣಗೌಡ ಅವರಿಗೆ ನಾಲ್ಕು ಜನ ಮಕ್ಕಳಲ್ಲಿ ಯಲ್ಲಪ್ಪ ಒಬ್ಬನೇ ಗಂಡು ಮಗ. ಕುಟುಂಬಕ್ಕೆ ಆಸರೆಯಾಗಲು ಪಿಯುಸಿ ನಂತರ ಓದು ನಿಲ್ಲಿಸಿದ ಯಲ್ಲಪ್ಪ ಟೇಪ್ ಕಾರ್ಖಾನೆಯಲ್ಲಿ 12 ಸಾವಿರ ರೂ ಸಂಬಳದ ಕೆಲಸಕ್ಕೆ ಸೇರಿ ಕೇವಲ ಮೂರು ತಿಂಗಳಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News