ಬೆಳಗಾವಿ ಅಧಿವೇಶನ | ಮಾಜಿ ಸೈನಿಕರಿಗೆ ನಿವೇಶನ ನೀಡಲು ಕ್ರಮ : ಕೃಷ್ಣ ಬೈರೇಗೌಡ
ಬೆಳಗಾವಿ (ಸುವರ್ಣ ವಿಧಾನಸೌಧ) : ಮಾಜಿ ಸೈನಿಕರಿಗೆ ವ್ಯವಸಾಯದ ಉದ್ದೇಶಕ್ಕಾಗಿ ಭೂ ಮಂಜೂರಾತಿ ಮಾಡಲು ರಾಜ್ಯದಲ್ಲಿ ಸರಕಾರಿ ಭೂಮಿಯ ತೀವ್ರ ಕೊರತೆಯಿರುವುದರಿಂದ, ಅವರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬುಧವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಸಿ.ಎನ್.ಮಂಜೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇಶಕ್ಕಾಗಿ ಸೇವೆ ಸಲ್ಲಿಸಿರುವ ಮಾಜಿ ಸೈನಿಕರ ಕುರಿತಂತೆ ಗೌರವ ಮತ್ತು ಅಭಿಮಾನವಿದೆ. ಜವಾನ್ ಸಮ್ಮಾನ್ ಹೆಸರಿನಲ್ಲಿ ಮಾಜಿ ಸೈನಿಕರಿಗೆ ಸರಕಾರಿ ವೆಚ್ಚದಲ್ಲಿಯೇ ಲೇಔಟ್ ಮಾಡಿ, ನಿವೇಶನ ನೀಡುವ ಕುರಿತಂತೆ ಪ್ರಸ್ತುತ ಅಧಿವೇಶನ ಮುಗಿದ ಕೂಡಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ರಾಜ್ಯದಲ್ಲಿ ಪ್ರಸ್ತುತ 16,065 ಮಾಜಿ ಸೈನಿಕರು ಭೂ ಮಂಜುರಾತಿಗಾಗಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 6783 ಅರ್ಜಿ ವಿಲೇವಾರಿ ಮಾಡಿದ್ದು, 9282 ಅರ್ಜಿಗಳು ಬಾಕಿ ಇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.