ಬೆಳಗಾವಿ ಅಧಿವೇಶನ | ತುಳಸೀಗೌಡ ನಿಧನಕ್ಕೆ ಉಭಯ ಸದನಗಳಲ್ಲಿ ಸಂತಾಪ

Update: 2024-12-17 12:50 GMT

ಬೆಳಗಾವಿ (ಸುವರ್ಣ ವಿಧಾನಸೌಧ) : ವೃಕ್ಷಮಾತೆ ಎಂದೇ ಖ್ಯಾತಿಗಳಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕು ಮೂಲದ ತುಳಸೀ ಗೌಡ ಅವರ ನಿಧನಕ್ಕೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮಂಗಳವಾರ ಬೆಳಗ್ಗೆ ಸದನ ಸೇರಿದಾಗ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿ ತುಳಿಸೀ ಗೌಡ ಅವರು ನಿಧನ ಹೊಂದಿರುವುದನ್ನು ವಿಷಾದದಿಂದ ಸದನಕ್ಕೆ ತಿಳಿಸಿದರು. ಅಂಕೋಲ ತಾಲೂಕಿನ ಹೊನ್ನಹಳ್ಳಿಯ ತುಳಸೀ ಗೌಡ ಹಾಲಕ್ಕಿ ಬುಡಕಟ್ಟು ಸಮುದಾಯದ ಬಡ ಕುಟುಂಬದಲ್ಲಿ ಜನಿಸಿದ್ದು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು.

ಮರಗಳೊಂದಿಗೆ ಅನುಭವ ಹಾಗೂ ಅಪಾರ ಜ್ಞಾನ ಹೊಂದಿದ್ದ ಅವರು, ಅರಣ್ಯದ ಎನ್‍ಸೈಕ್ಲೋಪಿಡಿಯಾ, ವೃಕ್ಷಮಾತೆ ಎಂದೇ ಪ್ರಖ್ಯಾತರಾಗಿದ್ದರು. 300ಕ್ಕೂ ಹೆಚ್ಚು ಮರಗಳ ಪ್ರಭೇದಗಳನ್ನು ತಿಳಿದಿದ್ದ ಅವರು, ನಿಂತ ಜಾಗದಲ್ಲೇ ಅವುಗಳ ಬಗ್ಗೆ ವಿವರಿಸುವಷ್ಟು ಜ್ಞಾನ ಹೊಂದಿದ್ದರು. ಅರಣ್ಯ ಇಲಾಖೆ ಜೊತೆ ಕೈಜೋಡಿಸಿ 65 ವರ್ಷಗಳಿಂದ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರು ಎಂದು ಸ್ಮರಿಸಿದರು.

ಬಾಲ್ಯದಲ್ಲೇ ವಿಧವೆಯಾದ ತುಳಸಿಗೌಡ ಮರಗಳಲ್ಲೇ ಕುಟುಂಬ ಹಾಗೂ ಮಕ್ಕಳನ್ನು ಕಂಡವರು. ಒಂದು ಕಾಲದಲ್ಲಿ ಕಾಡಿನಿಂದ ಕಟ್ಟಿಗೆ ತರುತ್ತಿದ್ದ ಅವರು, ಇಂದು ಕಾಡನ್ನೇ ನಿರ್ಮಿಸಿ ಮಾದರಿಯಾಗಿದ್ದಾರೆ. ಲಕ್ಷಾಂತರ ಮರಗಳನ್ನು ನೆಟ್ಟು ಪೋಷಿಸಿದ್ದ ಅವರ ಪರಿಸರ ಪ್ರೇಮಕ್ಕಾಗಿ 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ರಾಜ್ಯೋತ್ಸವ, ಪ್ರಿಯದರ್ಶಿನಿ, ವೃಕ್ಷಮಿತ್ರ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ವೃಕ್ಷಗಳ ಆರೈಕೆ ಮೂಲಕ ಪ್ರಸಿದ್ದಿ ಪಡೆದಿದ್ದ 81 ವರ್ಷದ ತುಳಸೀ ಗೌಡ ನಿನ್ನೆ ನಿಧನ ಹೊಂದಿದ್ದಾರೆ ಎಂದು ತಿಳಿಸಿದರು.

ನಿರ್ಣಯವನ್ನು ಬೆಂಬಲಿಸಿ ಸರಕಾರದ ಪರವಾಗಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ‘ತುಳಸೀಗೌಡಗೆ ಅರಣ್ಯದ ಮೇಲೆ ಪ್ರೀತಿಯಿತ್ತು. 300ಕ್ಕೂ ಹೆಚ್ಚು ತಳಿಗಳ ಬಗ್ಗೆ ತಿಳುವಳಿಕೆ ಹೊಂದಿದ್ದರು. ವೃಕ್ಷ ಮಾತೆ ಎಂದು ಕರೆಯುವಷ್ಟರ ಮಟ್ಟಿಗೆ ಅವರು ವೃಕ್ಷಗಳ ಆರೈಕೆಗೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡಿದ್ದರು. ಅವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತೇನೆ ಎಂದು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ‘ತುಳಸೀ ಗೌಡ ಇಂದು ನಮ್ಮ ನಡುವೆ ಇಲ್ಲ. ಬಡ ಕುಟುಂಬದಲ್ಲಿ ಜನಿಸಿದ್ದರೂ ವೃಕ್ಷ ಬೆಳೆಸುವ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ. ಸತ್ತ ಮೇಲೂ ಕೆಲವರು ಬದುಕುತ್ತಾರೆ. ಅಂತಹವರ ಸಾಲಿಗೆ ಇವರು ಸೇರುತ್ತಾರೆ ಎಂದರು. ಅನಂತರ ಸದನದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಂತಾಪ ಸೂಚಕ ನಿರ್ಣಯವನ್ನು ಅವರ ಕುಟುಂಬ ವರ್ಗದವರಿಗೆ ಕಳುಹಿಸಿ ಕೊಡುವುದಾಗಿ ಸ್ಪೀಕರ್ ಖಾದರ್ ಹೇಳಿದರು. 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News