ಬೆಳಗಾವಿ ಅಧಿವೇಶನ | ಕರ್ನಾಟಕ ಸರಕು-ಸೇವೆಗಳ ತೆರಿಗೆ (2ನೇ ತಿದ್ದುಪಡಿ) ವಿಧೇಯಕ ಅಂಗೀಕಾರ
ಬೆಳಗಾವಿ (ಸುವರ್ಣ ವಿಧಾನಸೌಧ) : ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (2ನೇ ತಿದ್ದುಪಡಿ) ವಿಧೇಯಕ 2024ವು ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಯಿತು.
ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2024ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ 2024ವನ್ನು ಪರ್ಯಾಯಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಪರವಾಗಿ ಸಚಿವ ಕೃಷ್ಣ ಭೈರೇಗೌಡ ಅವರು ಸದನಕ್ಕೆ ಸೂಚಿಸಿದರು. ಈ ವೇಳೆ ವಿಧೇಯಕದ ಪರ್ಯಾಲೋಚನೆಗೆ ಸಭಾಪತಿಯವರು ಅವಕಾಶ ಕಲ್ಪಿಸಿದರು.
ತಿದ್ದುಪಡಿ ವಿಧೇಯಕ ಮೇಲೆ ಸದಸ್ಯರಾದ ನವೀನ್, ತಿಪ್ಪೇಸ್ವಾಮಿ ಹಾಗೂ ಇನ್ನಿತರರು ಮಾತನಾಡಿ, ಜಿಎಸ್‍ಟಿಗೆ ಸಂಬಂಧಿಸಿದಂತೆ 2015ರಿಂದ ಈಚೆಗೆ ಇಲಾಖೆ ಮತ್ತು ವ್ಯವಹಾರಸ್ಥರ ಮೇಲೆ ಘರ್ಷಣೆ ನಡೆಯುತ್ತಲೇ ಇವೆ. ಕಟ್ಟುನಿಟ್ಟಿನಿಂದ ವ್ಯವಹಾರ ಮಾಡುವ ವ್ಯಾಪಾರಸ್ಥರಿಗೆ ಹಿನ್ನೆಡೆಯಾಗದ ರೀತಿಯಲ್ಲಿ ಎಚ್ಚರಿಕೆ ವಹಿಸಿ ಜಿಎಸ್ಟಿ ಕಾಯ್ದೆ ತಿದ್ದುಪಡಿ ಅನುಷ್ಠಾನಕ್ಕೆ ಮುಂದಾಗಬೇಕು. ಜಿಎಸ್‍ಟಿ ಎರಡನೇ ತಿದ್ದುಪಡಿ ವಿಧೇಯಕವು ಸಣ್ಣ ವ್ಯಾಪಾರಸ್ಥರ ಪರವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಕಾಯ್ದೆಯನ್ನು ಮತ್ತಷ್ಟು ಸರಳೀಕರಣಗೊಳಿಸುವ ಪ್ರಯತ್ನದ ಭಾಗವಾಗಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ 2024ವನ್ನು ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹ ಎಂದು ವಿಪಕ್ಷ ಸದಸ್ಯರು ವಿಧೇಯಕಕ್ಕೆ ಬೆಂಬಲ ನೀಡಿದರು.
ಜಿಎಸ್‍ಟಿ ತಿದ್ದುಪಡಿ ವಿಧೇಯಕದ ಬಗ್ಗೆ ವಿಪಕ್ಷ ಸದಸ್ಯರಿಂದ ಬಂದಿರುವ ಸಲಹೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ತೆರಿಗೆದಾರರಿಂದ ಬಂದಿರುವ ಸಲಹೆಗಳನ್ನು ಕೂಡ ಪರಿಗಣಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿಯನುಸಾರ ಕಾಯಿದೆಯನ್ನು ಸರಳೀಕರಣಗೊಳಿಸುವ ಪ್ರಯತ್ನದ ಭಾಗವಾಗಿ ಮಾಡಲಾಗಿರುವ ಈ ತಿದ್ದುಪಡಿಗೆ ಅನುಮೋದನೆ ನೀಡಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಅವರು ಸದನಕ್ಕೆ ತಿಳಿಸಿ ವಿಧೇಯಕವನ್ನು ಅಂಗೀಕರಿಸಲು ಕೋರಿದರು. ಬಳಿಕ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.