ಮುಖ್ಯಮಂತ್ರಿ ಸ್ಥಾನವನ್ನೂ ನೀವು ಒದ್ದು ಕಿತ್ತುಕೊಳ್ಳುತ್ತೀರಾ..? ; ಡಿಸಿಎಂ ಡಿಕೆಶಿಗೆ ಆರ್.ಅಶೋಕ್ ಪ್ರಶ್ನೆ
ಬೆಳಗಾವಿ : ‘ಮುಖ್ಯಮಂತ್ರಿ ಸ್ಥಾನವನ್ನೂ ನೀವು ಒದ್ದು ಕಿತ್ತುಕೊಳ್ಳುತ್ತೀರಾ?’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದರು.
ಗುರುವಾರ ವಿಧಾನಸಭೆ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಶಿವಕುಮಾರ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪುವ ಸ್ಥಿತಿ ಇತ್ತು. ಆಗ ಕೃಷ್ಣರ ಮನೆಯ ಬಾಗಿಲನ್ನು ಒದ್ದು, ಸಚಿವ ಸ್ಥಾನವನ್ನು ಪಡೆದುಕೊಂಡಿದ್ದ ಘಟನೆಯನ್ನು ಉಲ್ಲೇಖ ಮಾಡಿದರು. ಆಗ ಮಧ್ಯೆಪ್ರವೇಶಿಸಿದ ಆರ್.ಅಶೋಕ್ ಮೇಲಿನಂತೆ ಕೇಳಿದರು.
ಆರಂಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ‘ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸೇರಬೇಕಾದವರ ಸಚಿವರ ಹಾಗೂ ಖಾತೆಗಳ ಪಟ್ಟಿಯನ್ನು ನಾನೇ ಸಿದ್ಧಪಡಿಸಿದ್ದೆ. ಆದರೆ, ರಾಜಭವನಕ್ಕೆ ಕಳುಹಿಸಿದ್ದು ಮಾತ್ರ 9 ಶಾಸಕರ ಹೆಸರು. ಅದರಲ್ಲಿ ನನ್ನ ಹೆಸರಿರಲಿಲ್ಲ. ಜಾತಿಗೊಂದು ಸಚಿವ ಸ್ಥಾನ ನೀಡಲಾಗಿತ್ತು. ನಾನು ಈ ವಿಚಾರವನ್ನು ನನ್ನ ಜ್ಯೋತಿಷಿ ದ್ವಾರಕಾನಾಥ್ ಗಮನಕ್ಕೆ ತಂದಾಗ ನಿಮಗೆ ಸ್ಥಾನವನ್ನು ಯಾರೂ ಕೊಡುವುದಿಲ್ಲ, ಒದ್ದು ಕಿತ್ತುಕೊಳ್ಳಬೇಕು’ ಎಂಬ ಸಲಹೆ ನೀಡಿದರು. ಅದೇ ರೀತಿ ನಾನು, ಮಾಜಿ ಸಚಿವ ಟಿ.ಬಿ.ಜಯಚಂದ್ರ ಜೊತೆ ಹೋಗಿ ಎಸ್.ಎಂ.ಕೃಷ್ಣರ ಮನೆಬಾಗಿಲನ್ನು ಒದ್ದು ಪ್ರಸಂಗವನ್ನು ತಿಳಿಸಿದರು.
‘ನಾನು ಯಾವಾಗಲೂ ನಿಮೊಂದಿಗಿದ್ದೇನೆ. ನನ್ನ ಹೊರತು ಪ್ರಮಾಣವಚನ ಆಗಬಾರದು ಎಂದು ಹೇಳಿದೆ. ಆಗ ಕೃಷ್ಣ ಅವರು ಏನು ನಿನ್ನ ರೌದ್ರಾವತಾರ?. ಈಗ ನೀನು ಮಂತ್ರಿಯಾಗಲು ಸಮಯ ಸರಿಯಾಗಿಲ್ಲ ಎಂದು ಜ್ಯೋತಿಷಿ ಹೇಳಿದ್ದಾರೆಂದರು. ಆದರೆ, ನಾನು ಪಟ್ಟು ಹಿಡಿದು ಪ್ರಮಾಣ ವಚನದ ಸಮಯವನ್ನು ಬದಲಾಯಿಸಿ ಹೈಕಮಾಂಡ್ ಒಪ್ಪಿಗೆ ಪಡೆದು ನಾವೆಲ್ಲ ಸಚಿವರಾದೆವು ಎಂದು ಅವರು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಆರ್.ಅಶೋಕ್, ‘ಈಗಲೂ ರಾಜ್ಯದಲ್ಲಿ ಅದೇ ಸ್ಥಿತಿಯಿದೆ. ಅದೇ ರೀತಿ ಮಾಡುತ್ತೀರಾ? ಎಂದರು. ನಾನು ಟೀಕೆ ಮಾಡುವುದಿಲ್ಲ. ಎಸ್.ಎಂ.ಕೃಷ್ಣರಿಂದ ನಿಮಗೆ ಒಳ್ಳೆಯದಾಗಿದೆ. ಈಗ ಮುಖ್ಯಮಂತ್ರಿ ಸ್ಥಾನವನ್ನು ಒದ್ದು ಕಿತ್ತುಕೊಳ್ಳಬೇಕೆಂದು ಹೇಳುತ್ತೀರಾ?. ನೀವು ಯಾವಾಗ ಒದ್ದು ಕಿತ್ತುಕೊಳ್ಳುತ್ತೀರಾ? ಯಾವಾಗ ಮುಹೂರ್ತ ನಿಗದಿ ಆಗಿದೆ?. ಜನವರಿಯೊಳಗೆ ನೀವು ಮುಖ್ಯಮಂತ್ರಿಯಾದರೆ ಆಗುತ್ತೀರಿ. ಇಲ್ಲವೆಂದರೆ ಇಲ್ಲ. ಜನವರಿ ನಂತರ ನಿಮ ಗ್ರಹಗತಿ ಸರಿಯಿಲ್ಲ ಎಂದು ಕಾಲೆಳೆದರು.
ನೀವು ಸೂಕ್ತ ತೀರ್ಮಾನ ಮಾಡಿ. ಇಲ್ಲವಾದರೆ ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗಬಾರದು. ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್‍ರ ವಿಚಾರದಲ್ಲಿ ಅವರ ನಡುವೆ ಇದೇ ರೀತಿಯಸ್ಥಿತಿ ಉಂಟಾಗಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗಿದ್ದರು. ನಿಮ್ಮ ವಿಚಾರದಲ್ಲಿ ಹಾಗೇ ಆಗದಿರಲಿ ಎಂದು ಅಶೋಕ್ ಛೇಡಿಸಿದರು.
ಈ ವೇಳೇ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್, ‘ಶಿವಕುಮಾರ್ ಅವರೇ ನಿಮಗೆ ವಿಪಕ್ಷ ನಾಯಕರು 2-3 ಪ್ರಶ್ನೆ ಕೇಳಿದ್ದಾರೆ. ಆ ಪ್ರಶ್ನೆಗಳಿಗೆ ನೀವು ನಿಮ್ಮ ಕೊಠಡಿಯಲ್ಲಿ ಅವರಿಗೆ ಉತ್ತರ ಕೊಡಿ, ಸದನದಲ್ಲಿ ಕೊಡಬೇಡಿ’ ಎಂದು ಸಲಹೆ ನೀಡಿದರು. ಆಗ ಬಿಜೆಪಿ ಸದಸ್ಯ ಸಿ.ಸಿ.ಪಾಟೀಲ್, ‘ನಿಮ್ಮ ನೇತೃತ್ವದಲ್ಲಾದರೂ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಲಿ’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ನಾನು ಇಲ್ಲಿ ಉತ್ತರ ಕೊಡುವುದಿಲ್ಲ. ಕೊಠಡಿಯಲ್ಲೇ ಉತ್ತರ ಕೊಡುತ್ತೇನೆʼ ಎಂದು ಹೇಳಿದರು.