ಬೆಳಗಾವಿ | ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭ
ಬೆಳಗಾವಿ : ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನದ ಸೋಮವಾರದಿಂದ ಆರಂಭವಾಗಿದೆ. ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ಕಲಾಪ ನಡೆಯಲಿದ್ದು, ʼವಂದೇ ಮಾತರಂʼ ಗಾಯನದ ಮೂಲಕ ಮೂಲಕ ಸದನಕ್ಕೆ ಚಾಲನೆ ದೊರೆಯಿತು.
ಅಧಿವೇಶನದ ಕಲಾಪಕ್ಕೂ ಮುನ್ನ ಅಗಲಿದ ವಿಧಾನ ಸಭೆಯ ಮಾಜಿ ಸದಸ್ಯರು ಹಾಗೂ ನಾಡಿನ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷ ಹಾಗೂ ಸಚಿವರಾಗಿದ್ದ ಮನೋಹರ ಹನುಮಂತಪ್ಪ ತಹಶೀಲ್ದಾರ್, ಮಾಜಿ ಸಚಿವ ಕೆ.ಹೆಚ್.ಶ್ರೀನಿವಾಸ್, ಮಾಜಿ ಸದಸ್ಯರುಗಳಾದ ಬಸವರಾಜು ಎ.ಎಸ್., ಲಕ್ಷ್ಮೀ ನಾರಾಯಾಣ.ಕೆ ಹಾಗೂ ವೆಂಕಟರೆಡ್ಡಿ ಮುದ್ನಾಳ್, ಖ್ಯಾತ ಕೈಗಾರಿಕೋದ್ಯಮಿ ರತನ್ ನವಾಲ್ ಟಾಟಾ ಹಾಗೂ ಕಲಬುರಗಿಯ ಸೈಯದ್ ಶಾಹ್ ಖುಸ್ರೋ ಹುಸೇನಿ ಅವರ ನಿಧನದ ಸಂತಾಪ ಸೂಚನೆ ನಿರ್ಣಯವನ್ನು ಸದನದ ಮುಂದೆ ಮಂಡಿಸಿದರು.
ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ.ಪಾಟೀಲ್, ವಿಪಕ್ಷ ನಾಯಕ ಆರ್.ಅಶೋಕ್, ಜೆಡಿಎಸ್ ನಾಯಕ ಸುರೇಶ್‍ಬಾಬು ಸೇರಿದಂತೆ ಇನ್ನಿತರ ಸದಸ್ಯರು ಅಗಲಿದ ಗಣ್ಯರ ಬಗ್ಗೆ ಮಾತನಾಡಿ , ಅವರ ಸರಳತೆ, ಮುತ್ಸದ್ಧಿತನ, ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರು.
ಇತ್ತೀಚೆಗೆ 3 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು, ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನ ಪ್ರಮಾಣ ವಚನ ಸ್ವೀಕರಿಸಿದರು.
ಸಂಡೂರು ಕ್ಷೇತ್ರದಿಂದ ಆಯ್ಕೆಯಾದ ಅನ್ನಪೂರ್ಣ ತುಕಾರಾಂ, ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆಯಾದ ಸಿ.ಪಿ.ಯೋಗೇಶ್ವರ್ ಹಾಗೂ ಶಿಗ್ಗಾಂವಿ ಕ್ಷೇತ್ರದಿಂದ ಆಯ್ಕೆಯಾದ ಯಾಸಿರ್ ಅಹಮದ್ ಖಾನ್ ಪ್ರಮಾಣ ವಚನ ಸ್ವೀಕರಿಸಿದರು. ಸಭಾಧ್ಯಕ್ಷ ಯು.ಟಿ.ಖಾದರ್ ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ವಿಧಾನ ಮಂಡಲದ ಉಭಯ ಸದನದಲ್ಲಿ ವಿವಿಧ ವಿಚಾರಗಳು ಚರ್ಚೆಯಾಗಲಿದ್ದು, ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಗ್ಯುದ್ಧವೇ ನಡೆಯುವ ಸಾಧ್ಯತೆ ಇದೆ. ಇಂದಿನಿಂದ ಡಿ.19 ರವರೆಗೂ ಬೆಳಗಾವಿಯ ಸುವರ್ಣಸೌಧದಲ್ಲಿ ಕಲಾಪ ನಡೆಯಲಿದೆ.