ಬೆಂಗಳೂರಿನಲ್ಲಿ ಮಳೆಯಿಂದಾಗುವ ಹಾನಿ ತಡೆಗೆ 5 ಸಾವಿರ ಕೋಟಿ ರೂ.ಗಳ ಶಾಶ್ವತ ಯೋಜನೆ : ಸಚಿವ ಕೃಷ್ಣ ಭೈರೇಗೌಡ
ಬೆಳಗಾವಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳಲ್ಲಿ ಅತಿಹೆಚ್ಚು ಮಳೆಯಿಂದ ಪ್ರವಾಹ ರೀತಿಯಲ್ಲಿ ಉಂಟಾಗುವ ಅತಿವೃಷ್ಟಿಯ ಹಾನಿಯನ್ನು ತಡೆಗಟ್ಟಲು ಒಟ್ಟು 5 ಸಾವಿರ ಕೋಟಿ ರೂ. ಗಳ ಶಾಶ್ವತ ಯೋಜನೆಯನ್ನು ರೂಪಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಪ್ರಸಕ್ತ ವರ್ಷ ರಾಜ್ಯದಲ್ಲಿ ಅಧಿಕ ಮಳೆಯಿಂದ ಉಂಟಾದ ಹಾನಿ ಕುರಿತಂತೆ ಶುಕ್ರವಾರ ವಿಧಾನಸಭೆಯಲ್ಲಿ ಸರಕಾರದ ಪರವಾಗಿ ಹೇಳಿಕೆ ನೀಡಿದ ಅವರು, ಬೆಂಗಳೂರು ವ್ಯಾಪ್ತಿಯಲ್ಲಿ ಅತಿಹೆಚ್ಚು ಮಳೆ ಸುರಿದಾಗ ಪದೇ ಪದೇ ಹಾನಿಗೊಳಗಾಗುವ ಪ್ರದೇಶಗಳನ್ನು ಗುರುತಿಸಲಾಗಿದೆ. ಮಳೆ ಸುರಿದಂತಹ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿಯುವಂತೆ ರಾಜಕಾಲುವೆ ಹಾಗೂ ವಸತಿ ಪ್ರದೇಶದಲ್ಲಿನ ಕಾಲುವೆಗಳನ್ನು ಪರಿಪಕ್ವವಾಗಿ ಸುಧಾರಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಈ ವ್ಯಾಪ್ತಿಯಲ್ಲಿ 856 ಕಿ.ಮೀ. ರಾಜಕಾಲುವೆಗಳಿದ್ದು, ರಾಜಕಾಲುವೆ ಇಲ್ಲದ ಕಡೆ 200 ಕಿ.ಮೀ. ಕಿರು ಕಾಲುವೆಗಳು ಸೇರಿದಂತೆ ಒಟ್ಟು 1100 ಕಿ.ಮೀ. ಕಾಲುವೆಗಳಲ್ಲಿ ಹೆಚ್ಚಿನ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಶಾಶ್ವತ ಯೋಜನೆಯನ್ನು ರೂಪಿಸಲಾಗಿದೆ. ಈಗಾಗಲೆ 700 ಕಿ.ಮೀ. ಅಭಿವೃದ್ಧಿಪಡಿಸಲಾಗಿದ್ದು ಇನ್ನೂ 300 ಕಿ.ಮೀ. ರಾಜಕಾಲುವೆಯನ್ನು ಬರುವ ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗುವುದು, ಇದಕ್ಕಾಗಿ ವಿಪತ್ತು ನಿರ್ವಹಣಾ ನಿಧಿ ಅಡಿಯಲ್ಲಿ 240 ಕೋಟಿ ರೂ. ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಮಳೆ ಬಂದಾಗ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ 5 ಸಾವಿರ ಕೋಟಿ ರೂ.ವೆಚ್ಚದಲ್ಲಿ ಶಾಶ್ವತ ಪರಿಹಾರ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ. ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದಾಗುವ ಹಾನಿ ತಡೆಗಟ್ಟಲು ಒಂದು ಬಾರಿಯ ಶಾಶ್ವತ ಕಾಮಗಾರಿ ಕೈಗೊಳ್ಳಲು ವಿಶ್ವಬ್ಯಾಂಕ್ ನೆರವು ಪಡೆಯುವ ನಿಟ್ಟಿನಲ್ಲಿ ಈಗಾಗಲೆ 10 ಸುತ್ತಿನ ಸಭೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.
ವಿಶ್ವಬ್ಯಾಂಕ್ನಿಂದ 3 ಸಾವಿರ ಕೋಟಿ ರೂ. ಸಾಲ ಪಡೆದು, ಬಿಬಿಎಂಪಿ ಮೂಲಕ 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎಲ್ಲ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲಿ ಒಳಚರಂಡಿ ವ್ಯವಸ್ಥೆ ಇರದ ಕಡೆ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ರೂಪಿಸಿ ನೀರು ನೇರವಾಗಿ ಸೀವೆಜ್ ಟ್ರೀಟ್ಮೆಂಟ್ ವಾಟರ್ ಲೈನ್ಗೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು, ಈ ಕಾರ್ಯಕ್ಕೆ ಬೆಂಗಳೂರು ಜಲಮಂಡಳಿಗೆ 1 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ. ಇನ್ನಿತರೆ ಕಾಮಗಾರಿಗಳಿಗಾಗಿ 2 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ವಿವರಿಸಿದರು.
ಇನ್ನುಳಿದ 2 ಸಾವಿರ ಕೋಟಿ ರೂ. ಗಳನ್ನು ರಾಜ್ಯ ಸರಕಾರ ಭರಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಮಳೆಯಿಂದ ಪದೇ ಪದೇ ಹಾನಿಗೀಡಾಗುವ ಪ್ರಮುಖ ರಸ್ತೆಗಳನ್ನು ಗುರುತಿಸಲಾಗಿದ್ದು, ಇಂತಹ ರಸ್ತೆಗಳನ್ನು ದುರಸ್ತಿಪಡಿಸಿ, ಡಾಂಬರೀಕರಣಗೊಳಿಸಲು 695 ಕೋಟಿ ರೂ. ಗಳ ಯೋಜನೆ ರೂಪಿಸಿ, ಸಚಿವ ಸಂಪುಟದ ಅನುಮೋದನೆ ಪಡೆದು ಈಗಾಗಲೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ಒಟ್ಟಾರೆ ಬೆಂಗಳೂರಿನಲ್ಲಿ ಅತಿಯಾದ ಮಳೆಯಾದಾಗ ಹಾನಿಯಾಗುವುದನ್ನು ತಡೆಗಟ್ಟಲು ಸರಕಾರ ಶಾಶ್ವತವಾದ ಯೋಜನೆಗಳನ್ನು ರೂಪಿಸಿದ್ದು, ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.
ಪೂರ್ವ ಮುಂಗಾರಿನಲ್ಲಿ 151 ಎಂ.ಎಂ.ಮಳೆ, ಮುಂಗಾರಿನಲ್ಲಿ 978 ಎಂ.ಎಂ. ಮಳೆಯಾಗಿದೆ. ಇದು ವಾಡಿಕೆಗಿಂತ ಶೇ.20ರಷ್ಟು ಹೆಚ್ಚಳ. 133 ಜನ ಪ್ರಾಣ ಕಳೆದುಕೊಂಡಿದ್ದಾರೆ. ತಲಾ 5 ಲಕ್ಷ ರೂ.ಗಳಮತೆ 6.64 ಕೋಟಿ ರೂ.ಪರಿಹಾರ ನೀಡಿದ್ದೇವೆ. 714 ಜಾನುವಾರುಗಳ ಪ್ರಾಣಹಾನಿಯಾಗಿದ್ದು, 1.20 ಕೋಟಿ ರೂ.ಪರಿಹಾರ ನೀಡಿದ್ದೇವೆ. ಮುಂಗಾರು ಹಂಗಾಮಿನಲ್ಲಿ 1.59 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 94.94 ಕೋಟಿ ರೂ. ಪರಿಹಾರ, ಹಿಂಗಾರು ಹಂಗಾಮಿನಲ್ಲಿ 1.45 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 112.17 ಕೋಟಿ ರೂ.ಪರಿಹಾರವನ್ನು ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕ ಆಸ್ತಿಪಾಸ್ತಿ, ರಸ್ತೆ, ಶಾಲಾ, ಕಾಲೇಜು, ಅಂಗನವಾಡಿ, ವಿದ್ಯುತ್ ಸಂಪರ್ಕ ಮೂಲಸೌಕರ್ಯಕ್ಕೆ ಆಗಿರುವ ಹಾನಿಯ ದುರಸ್ತಿ ಕಾರ್ಯಕ್ಕೆ, ತುರ್ತು ಪರಿಹಾರಗಳಿಗಾಗಿ 80.47 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, 60.16 ಕೋಟಿ ರೂ.ಬಿಡುಗಡೆ ಆಗಿದೆ. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ರವರ ಖಾತೆಯಲ್ಲಿ 579 ಕೋಟಿ ರೂ. ಇದೆ ಎಂದು ಅವರು ಹೇಳಿದರು.
ಮನೆಗಳಿಗೆ ನೀರು ನುಗಿದ್ದರಿಂದ 290 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ, 25,914 ಮಂದಿ ಸಂತ್ರಸ್ತರಿಗೆ ಆಶ್ರಯ ನೀಡಿದ್ದೇವೆ. ತುರ್ತು ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸಲು ಎಸ್ಡಿಆರ್ ಎಫ್ ಹಾಗೂ ಎನ್ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿತ್ತು. ಭೂ ಕುಸಿತದಂತಹ ಪ್ರಕರಣಗಳನ್ನು ಶಾಶ್ವತವಾಗಿ ಪರಿಹರಿಸಲು ಸರಕಾರ ಮುಂದಿನ ಎರಡೂವರೆ ವರ್ಷಗಳಲ್ಲಿ 425 ಕೋಟಿ ರೂ.ಗಳನ್ನು ಖರ್ಚು ಮಾಡುವ ಯೋಜನೆ ರೂಪಿಸಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದಲೂ ಈ ಸಂಬಂಧ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ. ಭೂ ಕುಸಿತದ ಆಪಾಯವಿರುವಂತಹ 863 ಗ್ರಾಮ ಪಂಚಾಯಿತಿಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು.