ಪ್ರಭಾಕರ್ ಕೋರೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿಲ್ಲ : ಡಿ.ಕೆ.ಶಿವಕುಮಾರ್

Update: 2025-01-20 21:55 IST
ಪ್ರಭಾಕರ್ ಕೋರೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿಲ್ಲ : ಡಿ.ಕೆ.ಶಿವಕುಮಾರ್
  • whatsapp icon

ಬೆಳಗಾವಿ : ಬಿಜೆಪಿ ನಾಯಕ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯ ಪ್ರಭಾಕರ್ ಕೋರೆ ಅವರನ್ನು ನಾವು ಕಾಂಗ್ರೆಸ್ ಪಕ್ಷಕ್ಕೆ ಕರೆದೂ ಇಲ್ಲ, ಅವರು ಬರುವುದೂ ಇಲ್ಲ. ಇದೊಂದು ಸೌಹರ್ದಯುತ ಭೇಟಿ ಅಷ್ಟೇ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಸೋಮವಾರ ನಗರದಲ್ಲಿರುವ ಪ್ರಭಾಕರ್ ಕೋರೆ ಅವರ ಮನೆಗೆ ಭೇಟಿ ನೀಡಿದ ನಂತರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಭಾಕರ್ ಕೋರೆ ನಮಗೆ ಶಾಶ್ವತ ಗೆಳೆಯರು. ಯಾವುದೇ ಸರಕಾರವಿದ್ದರೂ ಅವರ ಸಂಸ್ಥೆಗಳಿಂದ ಸಹಕಾರ ನೀಡುತ್ತಾರೆ. ಗಾಂಧಿ ಭಾರತ ಕಾರ್ಯಕ್ರಮವಿರುವ ಕಾರಣ ಗಣ್ಯರು ಉಳಿದುಕೊಳ್ಳಲು ಅವರ ಶಿಕ್ಷಣ ಸಂಸ್ಥೆಗಳಿಂದ 170 ಕ್ಕೂ ಹೆಚ್ಚು ಕೊಠಡಿಗಳನ್ನು ನೀಡಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಂಸ್ಥೆಯಿಂದ ಬೇಕಾದ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ಕಾರಣಕ್ಕೆ ಅವರ ಮನೆಗೆ ಬಂದು ಸೌಹಾರ್ದಯುತ ಭೇಟಿ ನೀಡಿ, ಊಟ ಮಾಡಿದೆ. ಒಳ್ಳೆಯ ಜೋಳದ ರೊಟ್ಟಿ ಊಟ ನೀಡಿದ್ದಾರೆ. ಜೋಳವನ್ನು ತಿನ್ನುವವನು ಜಟ್ಟಿಯಂತೆ ಆಗುವನು ಎನ್ನುವ ಮಾತಿದೆ ಎಂದ ಶಿವಕುಮಾರ್, ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕೋರೆ ಅವರ ಕುಟುಂಬ ದೊಡ್ಡ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಚಳವಳಿಗೆ ಧನ ಸಹಾಯ ಮಾಡಿದೆ. ಪ್ರಭಾಕರ್ ಕೋರೆ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರರು ಎಂದರು.

ಯತ್ನಾಳ್ ನ ಹುಚ್ಚಾಸ್ಪತ್ರೆಗೆ ಸೇರಿಸೋಣ :

ಮಹಾತ್ಮ ಗಾಂಧಿ ಅವರ ಹತ್ಯೆಯಲ್ಲಿ ನೆಹರೂ ಅವರ ಕೈವಾಡವಿತ್ತು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಎಂ.ಬಿ.ಪಾಟೀಲ್‍ಗೆ ಅವರ ಆಸ್ಪತ್ರೆಗೆ ಯತ್ನಾಳ್‍ರನ್ನು ದಾಖಲಿಸಿಕೊಳ್ಳಿ ಎಂದು ಹೇಳುವೆ ಅಥವಾ ಹುಚ್ಚಾಸ್ಪತ್ರೆಗೆ ಸೇರಿಸಲು ಏರ್ಪಾಟು ಮಾಡೋಣ ಎಂದು ತಿರುಗೇಟು ನೀಡಿದರು.

ಸುವರ್ಣ ವಿಧಾನಸೌಧ ಆವರಣದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಜ.21ರಂದು ಬೆಳಗ್ಗೆ 10.30ಕ್ಕೆ ಬೆಳಗಾವಿಗೆ ಆಗಮಿಸಬಹುದು ಎಂದು ಪ್ರಶ್ನೆಯೊಂದಕ್ಕೆ ಶಿವಕುಮಾರ್ ಉತ್ತರಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News