ಗ್ರಾಮ ಪಂಚಾಯತ್‍ಗಳ 5,257ಕೋಟಿ ರೂ.ವಿದ್ಯುತ್ ಶುಲ್ಕ ತೀರುವಳಿ : ಪ್ರಿಯಾಂಕ್ ಖರ್ಗೆ
ಬೆಳಗಾವಿ : ರಾಜ್ಯದ ಗ್ರಾಮ ಪಂಚಾಯತ್‍ಗಳು ಎಪ್ರಿಲ್ 2015ರಿಂದ ಮಾರ್ಚ್ 2023ರ ವರೆಗೆ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಪಾವತಿಸಬೇಕಾಗಿರುವ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ಬಾಕಿ ವಿದ್ಯುತ್ ಶುಲ್ಕದ ಒಟ್ಟು ಮೊತ್ತ 6,509,90 ಕೋಟಿ ರೂ.ಗಳಲ್ಲಿ ಅಸಲು ಮೊತ್ತ 5,257 ಕೋಟಿ ರೂ.ಗಳನ್ನು ಸರಕಾರದ ಖಾತರೀಕರಣ ಮೂಲಕ ತೀರುವಳಿ ಮಾಡಿ ಹಾಗೂ ಬಡ್ಡಿ ಮೊತ್ತ 1,252ಕೋಟಿ ರೂ.ಗಳನ್ನು ಮನ್ನಾ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಡಾ.ತಿಮ್ಮಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಪ್ರಿಲ್ 2023ರಿಂದ ಸೆಪ್ಟೆಂಬರ್ 2024ರ ವರೆಗೆ ಗ್ರಾಮ ಪಂಚಾಯತಿಗಳ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಯಾವರಗಳ ವಿದ್ಯುತ್ ಶುಲ್ಕದ ಒಟ್ಟು ಮೊತ್ತ 3,719.20 ಕೋಟಿ ರೂ.ಗಳು ಬಾಕಿ ಇದೆ. ಈ ಮೊತ್ತದಲ್ಲಿ ಅಸಲು ಮೊತ್ತ 2,749.54 ಕೋಟಿ ರೂ.ಗಳು ಮತ್ತು ಬಡ್ಡಿ ಮೊತ್ತ 969.66 ಕೋಟಿ ರೂ.ಗಳು ಒಳಗೊಂಡಿದ್ದು, ಸದರಿ ಮೊತ್ತವನ್ನು ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಪಾವತಿಸಬೇಕಾಗಿರುತ್ತದೆ ಎಂದರು.
ಗ್ರಾಮ ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗದ ಅಭಿವೃದ್ಧಿ ಅನುದಾನ/ಗ್ರಾಮ ಪಂಚಾಯತಿಗಳಿಗೆ ಸಹಾಯ ಹೆಸರಿನಲ್ಲಿ ಒಟ್ಟು 1202.18 ಕೋಟಿ ರೂ.ಗಳ ಅನುದಾನವನ್ನು 2024-25ನೇ ಸಾಲಿನಲ್ಲಿ ಒದಗಿಸಿದ್ದು, ಈ ಪೈಕಿ 391.79 ಕೋಟಿ ರೂ.ಗಳ ಅನುದಾನವನ್ನು ಗ್ರಾಮ ಪಂಚಾಯತಿಗಳ ವಿದ್ಯುತ್ ಶುಲ್ಕದ ಮೊತ್ತ ಭರಿಸಲು ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ, ಗ್ರಾಮ ಪಂಚಾಯತಿಗಳು ಸ್ವಂತ ಸಂಪನ್ಮೂಲದಿಂದ ವಿದ್ಯುತ್ ಶುಲ್ಕದ ಮೊತ್ತವನ್ನು ಭರಿಸಬಹುದಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
2024-25ನೇ ಸಾಲಿನ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಗೌರವ ಧನಕ್ಕಾಗಿ 273.78 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದ್ದು, ಡಿಸೆಂಬರ್ 2024 ರವರೆಗಿನ ಗೌರವಧನವನ್ನು ಬಿಡುಗಡೆ ಮಾಡಲಾಗಿದೆ. ಗ್ರಾಮಾಂತರದಲ್ಲಿರುವ ಪಂಚಾಯತ್‍ಗಳಿಗೆ ಅನುದಾನ ಹೆಚ್ಚಿಸುವ ಯಾವುದೇ ಪ್ರಸ್ತಾವ ಸರಕಾರದ ಮುಂದಿರುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.