ಗ್ರಾಮ ಪಂಚಾಯತ್ ಆಸ್ತಿಗಳ ಸಮೀಕ್ಷೆ : ಪ್ರಿಯಾಂಕ್ ಖರ್ಗೆ
ಬೆಳಗಾವಿ (ಸುವರ್ಣ ವಿಧಾನಸೌಧ) : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಎಲ್ಲಾ ಭೂಮಿ ಮತ್ತು ಕಟ್ಟಡಗಳ ಮ್ಯಾನ್ಯುಯಲ್ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಎಲ್ಲಾ ಭೂಮಿ ಮತ್ತು ಕಟ್ಟಡಗಳ ಮ್ಯಾನ್ಯೂಯಲ್ ಸಮೀಕ್ಷೆ ನಡೆಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಪಂಚತಂತ್ರ 2.0 ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದರು.
ಇಲ್ಲಿಯವರೆಗೆ ಮ್ಯಾನ್ಯೂಯಲ್ ಸಮೀಕ್ಷೆ ಮೂಲಕ 1,41,42,124 ಆಸ್ತಿಗಳನ್ನು ಸಮೀಕ್ಷೆ ಮಾಡಿ ಈ ಎಲ್ಲಾ ಆಸ್ತಿಗಳ ವಿವರಗಳನ್ನು ನಮೂನೆ-9ಎ ರಿಜಿಸ್ಟರ್‌ನಲ್ಲಿ ನಮೂದಿಸಲಾಗಿದೆ. ಗ್ರಾಮ ಪಂಚಾಯತ್‍ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.