ಅಂಬೇಡ್ಕರ್ ವೃತ್ತ ನಿರ್ಮಾಣ ವಿಳಂಬ| 15 ದಿನಗಳಲ್ಲಿ ಪ್ರಕ್ರಿಯೆ ಆರಂಭಿಸದಿದ್ದರೆ ಸರಣಿ ಹೋರಾಟ: ದಲಿತ ಸಂಘಟನೆಗಳ ಸಮನ್ವಯ ಸಮಿತಿ

Update: 2024-07-24 13:20 GMT

ಮಂಗಳೂರು: ನಗರದ ಜ್ಯೋತಿಯಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣದ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, 15 ದಿನಗಳಲ್ಲಿ ಪ್ರಕ್ರಿಯೆ ಆರಂಭಿಸದಿದ್ದರೆ ಸರಣಿ ಹೋರಾಟ ನಡೆಸುವುದಾಗಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖರಾದ ಎಂ. ದೇವದಾಸ್, ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳ ಈ ವಿಳಂಬ ಧೋರಣೆ ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್‌ರವರಿಗೆ ಮಾಡುತ್ತಿರುವ ಅವಮಾನ ಎಂದರು.

1994ರಲ್ಲಿ ಅಂದಿನ ಜಿಲ್ಲಾಧಿಕಾರಿ ಭರತ್‌ಲಾಲಾ ಮೀನಾರವರ ಮುತುವರ್ಜಿಯಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ತೀರ್ಮಾನ ಆಗಿತ್ತು. ಬಳಿಕ ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಈ ವೃತ್ತ ನಿರ್ಮಾಣ ಕಾರ್ಯ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗಲಿದೆ ಎಂದು ಹೇಳಿ ನೀಲನಕ್ಷೆ ತಯಾರಿಸಿ, ಅನುದಾನ ದೊರಕಿ ಅಂಬೇಡ್ಕರ್‌ರವರ ಪುತ್ಥಳಿ ಜತೆ ವೃತ್ತ ನಿರ್ಮಾಣದ ಕಾಮಗಾರಿ ನಡೆಸುವ ಪ್ರಕ್ರಿಯೆಗೆ ಒಂದು ವರ್ಷ ಕಳೆದರೂ ಚಾಲನೆ ನೀಡಲಾಗಿಲ್ಲ ನಗರದ ವಿವಿಧ ಕಡೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಖುದ್ದು ಶಾಸಕರೇ ಆಸಕ್ತಿ ವಹಿಸಿ ಹಲವು ಹೊಸ ವೃತ್ತಗಳನ್ನು ಅಲ್ಪಾವಧಿ ಯಲ್ಲಿ ನಿರ್ಮಿಸಿದ್ದಾರೆ. ಮಂಜೇಶ್ವರ ಗೋವಿಂದ ಪೈ, ನಾರಾಯಣಗುರು, ಕೋಟಿ ಚನ್ನಯ್ಯ, ಸರ್ವಜ್ಞ ಮೊದಲಾದ ಹೆಸರಿನ ವೃತ್ತಗಳು ಯಾವುದೇ ತಕರಾರು ಇಲ್ಲದೆ ಕೆಲ ಸಮಯದಲ್ಲೇ ನಿರ್ಮಾಣವಾಗಿದೆ. ಆದರೆ ಅಂಬೇಡ್ಕರ್ ವೃತ್ತ ನಿರ್ಮಾಣದ ಬಗ್ಗೆ ಅವರಿಗೆ ಆಸಕ್ತಿ ಇದ್ದ ಹಾಗಿಲ್ಲ ಎಂದು ದೇವದಾಸ್ ಆಕ್ಷೇಪಿಸಿದರು.

ಕಳೆದ ಹಲವು ವರ್ಷಗಳಿಂದ ವೃತ್ತ ನಿರ್ಮಾಣದ ಕುರಿತಂತೆ ದಲಿತ ನಾಯಕರಿಗೆ ಸುಳ್ಳು ಭರವಸೆ ಹಾಗೂ ಸುಳ್ಳು ಮಾಹಿತಿಗಳನು ನೀಡಲಾಗುತ್ತಿದೆ. ಎರಡು ಅವಧಿಗೆ ಶಾಸಕರಾಗಿ ಆಯ್ಕೆಯಾದ ಶಾಸಕ ವೇದವ್ಯಾಸ ಕಾಮತ್ ಈ ಬಗ್ಗೆ ಮಾತನಾಡುತ್ತಿಲ್ಲ. ನಗರ ಪಾಲಿಕೆ ಕೂಡಾ ನಿರ್ಲಕ್ಷ್ಯ ವಹಿಸಿದ್ದು, ಸರಣಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.

ಕಳೆದ 30 ವರ್ಷಗಳಿಂದ ಜಿಲ್ಲೆ ವಿವಿಧ ದಲಿತ ಸಂಘಟನೆಗಳು ಜಿಲ್ಲಾ ಮಟ್ಟದ, ನಗರ ಮಟ್ಟದ ಸಭೆಗಳಲ್ಲಿ ಈ ಬಗ್ಗೆ ಒತ್ತಾಯಿಸುತ್ತಾ ಬಂದಿದೆ. ಹಿಂದಿನ ಮೇಯರ್ ಪ್ರೇಮಾನಂದ ಶೆಟ್ಟಿಯವರ ಜತೆಗಿನ ಮಾತುಕತೆಯ ಸಂದರ್ಭ ಅವರು ಆಸಕ್ತಿ ವಹಿಸಿ ವೃತ್ತದ ಜತೆಗೆ ಪಾರ್ಶ್ವದಲ್ಲಿರುವ ಖಾಲಿ ಜಾಗದಲ್ಲಿ ಗೋಲಾಕಾರದಲ್ಲಿ ಅಂಬೇಡ್ಕರ್‌ರವರ ಪುತ್ಥಳಿ, ಅಶೋಕ ಸ್ತಂಭ ನಿರ್ಮಾಣಕ್ಕೆ ನಿರ್ಣಯಿಸಲಾಗಿತ್ತು. ಆದರೆ ಇದೀಗ ಕೆಲ ಸಭೆಗಳಲ್ಲಿ ನಮ್ಮ ಸಂಘಟನೆಗಳ ನಡುವೆ ಒಗ್ಗಟ್ಟು ಇಲ್ಲ ಎಂಬ ತಪ್ಪು ಮಾಹಿತಿಗಳನ್ನು ಕೆಲ ಅಧಿಕಾರಿಗಳು ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಇದೀಗ ಹೋರಾಟ ಒಂದೇ ನಮ್ಮ ಮುಂದಿರುವ ದಾರಿ ಎಂದು ಮುಖಂಡರಾದ ಅಶೋಕ್ ಕೊಂಚಾಡಿ, ಜಿನ್ನಪ್ಪ ಬಂಗೇರ, ಎಸ್.ಪಿ. ಆನಂದ ಹೇಳಿದರು.

ಗೋಷ್ಟಿಯಲ್ಲಿ ರಘು ಎಕ್ಕಾರು, ಸುಧಾಕರ ಬೋಳಾರ್, ಗಣೇಶ್ ಸೂಟರ್‌ಪೇಟೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News