ಬೀದರ್ | ಜಿಲ್ಲೆಗೆ 10 ಕೋಟಿ ರೂ. ಮುಂಗಾರು ಬೆಳೆ ಪರಿಹಾರ ಬಿಡುಗಡೆ : ಸಚಿವ ಈಶ್ವರ್ ಖಂಡ್ರೆ
ಬೀದರ್ : ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 17,460 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಸರಕಾರವು 13.76 ಕೋಟಿ ರೂ.ಗಳ ಪೈಕಿ 10 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದ್ದು ರೈತರ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಜಮೆಯಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಸಾಕಷ್ಟು ಬೆಳೆ ಹಾನಿಯಾಗಿದೆ. ಸರಕಾರವು 10 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದ್ದು ಇನ್ನೂ 3.76 ಕೋಟಿ ರೂ. ಬರಲಿದೆ. ಜಿಲ್ಲೆಯ 15 ಸಾವಿರ ರೈತರ ಖಾತೆಗಳಿಗೆ ಮುಂಗಾರು ಬೆಳೆ ಪರಿಹಾರ ನೇರವಾಗಿ ಜಮೆಯಾಗಲಿದೆಯೆಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಸ್ಥರಿಗೆ 2 ಸಾವಿರ ರೂ. ಮಾಸಿಕ ವೇತನ ಸರಿಯಾಗಿ ಜಮೆ ಆಗುತ್ತಿರುವ ಬಗ್ಗೆ ಕಂದಾಯ ಅಧಿಕಾರಿಗಳು ಸೂಕ್ತ ಗಮನ ಇಡಬೇಕು. ಅವರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಶೈಕ್ಷಣಿಕ ಫೀ ಇಲಾಖೆಯು ಕಟ್ಟಬೇಕು. ಸಾಮಾಜಿಕ ಬದ್ಧತೆ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಗಳು ಸೂಕ್ತ ವರದಿ ನೀಡುವಂತೆ ಸಚಿವರು ಸೂಚಿಸಿದರು.
ಯಾವುದೇ ರೈತರಿಗೆ ಸಾಲ ಮರು ಪಾವತಿಸುವಂತೆ ಬ್ಯಾಂಕಗಳು ಒತ್ತಡ ಹೇರಬಾರದು. ರೈತರಿಗೆ ತೊಂದರೆಯಾಗದಂತೆ ಸುತ್ತೋಲೆ ಹೊರಡಿಸಬೇಕು. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ರೈತ ಅಭಿವೃದ್ಧಿ ಕಾರ್ಯಕ್ರಮಗಳು ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕೆಂದರು.
ಕಬ್ಬು ದರ ನಿಗದಿ ಕುರಿತು ಸಭೆ :
ಈ ತಿಂಗಳಲ್ಲಿ ಕಬ್ಬು ದರ ನಿಗದಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಶಾಸಕರು ಹಾಗೂ ಕಾರ್ಖಾನೆಗಳ ಅಧಿಕಾರಿಗಳ ಸಭೆಯನ್ನು ಜರುಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಚಿವರು ತಿಳಿಸಿದರು.
ಬಿ.ಎಸ್.ಎಸ್.ಕೆ. ಪುನಶ್ವೇತನಕ್ಕೆ ಅಗತ್ಯ ಕ್ರಮ :
ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚತನಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಶೀಘ್ರವೇ ಸಿ.ಎಂ.ಜೊತೆಗೆ ಚರ್ಚಿಸಲು ಜಿಲ್ಲೆಯ ಜನಪ್ರತಿನಿಧಿಗಳ ಪಕ್ಷಾತೀತವಾಗಿ ಸಭೆಯೊಂದನ್ನು ಜರುಗಿಸುವುದಾಗಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಮ್ ಖಾನ್ ಅವರು ಮಾತನಾಡಿ, ಈಗಾಗಲೇ ಕಾರ್ಖಾನೆಗೆ ಸಾಕಷ್ಟು ಆರ್ಥಿಕ ಹಾನಿಯಾಗಿದೆ. ಬ್ಯಾಂಕ್ ಅಧಿಕಾರಿಗಳು ಸಾಲ ನೀಡುವಲ್ಲಿ ಅಕ್ರಮ ಎಸಗಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕೆಂದರು.
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಕಲಿಕಾ ಮಟ್ಟ ಹಾಗೂ ಫಲಿತಾಂಶ ಮಟ್ಟ ಹೆಚ್ಚಿಸಲು ಕೈಗೊಂಡ ಕ್ರಮಗಳ ಬಗ್ಗೆ ಡಿಡಿಪಿಐಗೆ ತಿಳಿಸಿದರು. 20 ಅಂಶಗಳ ಕಾರ್ಯಕ್ರಮಗಳನ್ನು ಎಲ್ಲ ಶಾಲೆಗಳಲ್ಲಿ ಅನುಪಾಲನೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 25,460 ಮ್ಯಾಟ್ರಿಕ್ ವಿದ್ಯಾರ್ಥಿಗಳಿದ್ದು ಕಡಿಮೆ ಕಲಿಕಾ ಸಾರ್ಮಥ್ಯವಿರುವ ವಿದ್ಯಾರ್ಥಿಗಳಿಗೆ ಹಲವಾರು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಚಿವರ ಗಮನಕ್ಕೆ ತರಲಾಯಿತು. ಪ್ರಾಥಮಿಕ ಶಾಲೆಗಳಲ್ಲಿ 666 ಹಾಗೂ ಪ್ರೌಢ ಶಾಲೆಗಳಲ್ಲಿ 319 ಅತಿಥಿ ಶಿಕ್ಷಕರನ್ನು ಭರ್ತಿ ಮಾಡಲಾಗಿದ್ದು, ಶಿಕ್ಷಕರ ಕೊರತೆ ಇಲ್ಲವೆಂದು ಸಭೆಯ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಸಚಿವರು ವಿಶೇಷಚೇತನರಿಗೆ ತ್ರಿಚಕ್ರ ವಾಹನ, ಅಂಧ ಮಕ್ಕಳಿಗೆ ಬೈಲ್ ಲಿಪಿಯ ಲ್ಯಾಪ್ ಟಾಪ್ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವಿಶೇಷ ಕಲಿಕಾ ಪುಸ್ತಕಗಳನ್ನು ವಿತರಿಸಿದರು.
ಈ ಸಭೆಯಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆಯ ಕಾರ್ಯದರ್ಶಿ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಂದೀಪ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಮೆಹೆರೋಜ್ ಖಾನ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಅಮೃತರಾವ್ ಚಿಮಕೂಡ, ಬೀದರ್ ದಕ್ಷಿಣ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಬಸವಕಲ್ಯಾಣ ಶಾಸಕರಾದ ಶರಣು ಸಲಗರ, ವಿಧಾನ ಪರಿಷತ್ತಿನ ಸದಸ್ಯರಾದ ಭೀಮರಾವ್ ಪಾಟೀಲ್, ಡಾ.ಚಂದ್ರಶೇಖರ ಪಾಟೀಲ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ ಗುಂಟಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಾನತಿ ಎಂ.ಎಂ., ಬಸವಕಲ್ಯಾಣ ಸಹಾಯಕ ಆಯುಕ್ತರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.