ಬೀದರ್ | ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ ಪ್ರಕರಣ; ಡಿಸಿ ಮುಂದೆ ಅಳಲು ತೋಡಿಕೊಂಡ ದಲಿತರು
ಬೀದರ್ : ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದಲ್ಲಿ ಸವರ್ಣಿಯರಿಂದ ದಲಿತರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಜಿಲ್ಲಾಧಿಕಾರಿಗಳ ಮುಂದೆ ಪೋಲಿಸ್ ಅಧಿಕಾರಿಗಳ ವಿರುದ್ದ ದಲಿತ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ಘಟನೆಗೆ ಸಂಬಂಧಿಸಿದಂತೆ ದಲಿತರು ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಲು ತೆರಳಿರುವ ವೇಳೆ ನಮ್ಮ ದೂರನ್ನು ಸ್ವೀಕರಿಸದೇ ಪೊಲೀಸರು ಒತ್ತಾಯ ಪೂರ್ವಕವಾಗಿ ನಮ್ಮಿಂದ ದೂರನ್ನು ಬದಲಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 104 ದಲಿತರು ಸವರ್ಣೀಯರ ಮನೆಗೆ ನುಗ್ಗಿ ಮಹಿಳೆಯರ ಮೇಲೆ ಅತ್ಯಾಚಾರ ಸೇರಿದಂತೆ ದಲಿತರನ್ನು ಮುಗಿಸುವ ಹುನ್ನಾರವಿಟ್ಟುಕೊಂಡು ಗಂಭೀರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾಲ್ಕಿ ತಾಲೂಕಿನಲ್ಲಿ ನಡೆದ ದಲಿತರ ಮೇಲೆ ಹಲ್ಲೆ ವಿಷಯವಾಗಿ ಮಾಧ್ಯಮದವರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ಅವರು, ಈ ಘಟನೆಯ ಬಗ್ಗೆ ಸಂಪೂರ್ಣವಾದ ತನಿಖೆಯನ್ನು ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಾರ್ವಜನಿಕರು ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಸಮಗ್ರವಾಗಿ ತನಿಖೆ ಮಾಡಿದ ನಂತರ ಎಲ್ಲವೂ ಸ್ಪಷ್ಟಗೊಳ್ಳುತ್ತದೆ. ಈಗಾಗಲೇ ತನಿಖೆ ನಡೆಯುತ್ತಾ ಇರುವುದರಿಂದ ತನಿಖೆ ನಂತರ ಸಮಗ್ರ ಮಾಹಿತಿ ನೀಡುತ್ತೇನೆ ಎಂದರು.