ಬೀದರ್: ಅರಣ್ಯ ಇಲಾಖೆ ಜಮೀನಿನಲ್ಲಿ ಮಂದಿರ ನಿರ್ಮಾಣಕ್ಕೆ ಎರಡು ಸಮುದಾಯಗಳ ಮಧ್ಯೆ ವಾಗ್ವಾದ
ಬೀದರ್: ಅರಣ್ಯ ಇಲಾಖೆಗೆ ಸೇರಿದ ಖಾಲಿ ಜಾಗದಲ್ಲಿ ಮಂದಿರ ನಿರ್ಮಾಣಕ್ಕಾಗಿ ಎರಡು ಸಮುದಾಯದ ಜನರ ನಡುವೆ ವಾಗ್ವಾದ ನಡೆದ ಪ್ರಸಂಗ ಬೆಳಕಿಗೆ ಬಂದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆಸ್ತಿಯನ್ನು ಸ್ವಾಧೀನಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಬಸವಕಲ್ಯಾಣ ತಾಲೂಕಿನ ರಾಜೋಳಾ ಗ್ರಾಮದ ವ್ಯಾಪ್ತಿಯ ಅರಣ್ಯ ಇಲಾಖೆಯ ಜಮೀನಿನಲ್ಲಿ ಬೀರ್ ಲಿಂಗೇಶ್ವರ ದೇವಸ್ಥಾನ ಮತ್ತು ವೀರಭದ್ರೇಶ್ವರ ದೇವಸ್ಥಾನದ ನಿರ್ಮಾಣಕ್ಕಾಗಿ ಸಮುದಾಯದ ಜನರು ಸ್ವಚ್ಛತೆ ನಡೆಸುವ ವೇಳೆ ಎರಡು ಸಮುದಾಯದ ಜನರ ನಡುವೆ ಗಲಾಟೆ ಸಂಭವಿಸಿತ್ತು.
ಸುದ್ದಿ ತಿಳಿಸಿದ ಹುಮನಾಬಾದ್ ಡಿವೈಎಸ್ಪಿ ಜೆ.ಎಸ್ ನ್ಯಾಮಗೌಡರ ಮತ್ತು ಪಿಎಸ್ಐ ನಾಗೇಂದ್ರ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ, ಜನರ ಮಧ್ಯೆ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಮಹೇಂದ್ರ ಮೊದಯ ಅಧಿಕಾರಿಗಳ ತಂಡ, ಖಾಲಿ ಇರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದು, ಇಲ್ಲಿ ಯಾವುದೇ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿ ಖಾಲಿ ಜಾಗವನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಮುಂಜಾಗ್ರತೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಸದ್ಯ ಗ್ರಾಮದಲ್ಲಿ ಶಾಂತಿ ವ್ಯವಸ್ಥೆ ನಿರ್ಮಾಣವಾಗಿದೆ.