ಬೀದರ್ | ದಲಿತರ ಮೇಲೆ ಹಲ್ಲೆ ಪ್ರಕರಣ : ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತು, 69 ಮಂದಿ ವಶಕ್ಕೆ
ಬೀದರ್ : ದಲಿತರು ಹಾಗೂ ಸವರ್ಣೀಯರ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಸೇರಿ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಘಟನೆಗೆ ಸಂಬಂಧಿಸಿದ 192 ಜನರ ವಿರುದ್ಧ ದೂರು ದಾಖಲಿಸಿ, 69 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತರು 73 ಜನ ಸವರ್ಣೀಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 109 ಜನ ದಲಿತರ ವಿರುದ್ಧ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ಗ್ರಾಮಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದು, ಹೆಚ್ಚಿನ ಪೊಲೀಸ್ ಸಿಬ್ಬಂದಿಗಳು ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕರ್ತವ್ಯ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ ಖಟಕ ಚಿಂಚೋಳಿ ಠಾಣೆ ಪಿಎಸ್ಐ ರಾಚಯ್ಯ ಮಠಪತಿ ಹಾಗೂ ಮೂವರು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಒಟ್ಟು 4 ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.