ಬೀದರ್ | ಬಾಲ್ಯವಿವಾಹ ನಡೆಯದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ

ಶಿಲ್ಪಾ ಶರ್ಮಾ
ಬೀದರ್ : ಎ.30 ರಂದು ಅಕ್ಷಯ ತೃತೀಯ ದಿನವಿದ್ದು, ಬಾಲ್ಯವಿವಾಹ ಪ್ರಕರಣಗಳು ಹೆಚ್ಚು ನಡೆಯುವ ಸಾಧ್ಯತೆಯಿದೆ. ಎಲ್ಲಾ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಿ ತಮ್ಮ ಕಾರ್ಯವ್ಯಾಪ್ತಿ ಅಡಿಯಲ್ಲಿ ಯಾವುದೇ ಬಾಲ್ಯ ವಿವಾಹಗಳು ಜರುಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾದಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬಾಲ್ಯವಿವಾಹ ನಡೆಯುತ್ತಿರುವುದು ಗಮನಕ್ಕೆ ಬಂದರೆ ತುರ್ತಾಗಿ ಮಕ್ಕಳ ಸಹಾಯವಾಣಿ 1098 ಗೆ ಹಾಗೂ ಪೊಲೀಸ್ ಸಹಾಯವಾಣಿ 112 ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ 08482-234003 ಇಲ್ಲದಿದ್ದರೆ ಸಂಬಂಧಪಟ್ಟ ಪೊಲೀಸ್ ಠಾಣೆಯವರಿಗೆ ತುರ್ತಾಗಿ ಗಮನಕ್ಕೆ ತರಬೇಕು ಎಂದು ಮಾಹಿತಿ ನೀಡಿದ್ದಾರೆ.
ಬಾಲ್ಯವಿವಾಹವು ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಅನಿಷ್ಠ ಪದ್ಧತಿಯಾಗಿದ್ದು, ಈ ಶತಮಾನದಲ್ಲಿಯೂ ಮುಂದುವರೆದಿರುವುದು ಶೋಚನಿಯವಾಗಿದೆ. ಬಾಲ್ಯ ವಿವಾಹವೆಂದರೆ 18 ವರ್ಷದೊಳಗಿನ ಹುಡುಗಿ ಹಾಗೂ 21 ವರ್ಷದ ಒಳಗಿನ ಹುಡುಗನ ನಡುವೆ ನಡೆಯುವ ಮದುವೆಯಾಗಿದೆ. ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಸಹ ಇಂತಹ ಮದುವೆಯನ್ನು ಬಾಲ್ಯವಿವಾಹ ಎಂದು ಪರಿಗಣಿಸಲಾಗುತ್ತದೆ ಎಂದು ವಿವರಿಸಿದ್ದಾರೆ.
ಬಾಲ್ಯವಿವಾಹವೆಂಬ ಅನಿಷ್ಠ ಪದ್ಧತಿ ಹಾಗೂ ಸಾಮಾಜಿಕ ಪಿಡುಗು ಎಂದು ಗುರುತಿಸಿ, ಇದನ್ನು ನಿಷೇಧಿಸಲು ಕೇಂದ್ರ ಸರ್ಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆ 2006 ನ್ನು ಜಾರಿಗೆ ತಂದಿದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ, ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯತ್, ಗ್ರಾಮ ಮಟ್ಟದಲ್ಲಿ ಬಾಲ್ಯವಿವಾಹ ನಿಷೇಧಾಧಿಕಾರಿಗಳನ್ನು ನೇಮಿಸಲಾಗಿದೆ ಎಂದಿದ್ದಾರೆ.
ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಅಧಿನಿಯಮ-2016ರ ಪ್ರಕಾರ ಒಂದು ವೇಳೆ ಬಾಲ್ಯವಿವಾಹ ನಡೆದರೆ 18 ವರ್ಷದೊಳಗಿನ ಹೆಣ್ಣು ಮಗುವನ್ನು ಮದುವೆಯಾದ ವಯಸ್ಕ ವ್ಯಕ್ತಿ, ಮದುವೆ ಮಾಡುವ ಪೋಷಕರು, ಮದುವೆಯಲ್ಲಿ ಭಾಗವಹಿಸುವವರು, ಬಾಲ್ಯ ವಿವಾಹವನ್ನು ಏರ್ಪಡಿಸುವ, ನಿರ್ದೇಶಿಸುವ, ನೆರವೇರಿಸುವ ಮತ್ತು ಮದುವೆಗೆ ಕುಮ್ಮಕ್ಕು ನೀಡುವ ಸಂಸ್ಥೆ ಅಥವಾ ವ್ಯಕ್ತಿ, ಕಾಯ್ದೆಯಡಿ ನೀಡಿದ ತಡೆಯಾಜ್ಞೆ ಉಲ್ಲಂಘಿಸಿದವರು, ಮಗುವಿನ ಜವಾಬ್ದಾರಿಯನ್ನು ಹೊತ್ತ ಯಾವುದೇ ವ್ಯಕ್ತಿ ಮತ್ತು ಸಂಸ್ಥೆ, ನಿರ್ಲಕ್ಷತೆಯಿಂದ ಬಾಲ್ಯವಿವಾಹ ತಡೆಯಲು ವಿಫಲರಾದವರು ಇವರೆಲ್ಲರು ತಪ್ಪಿತಸ್ಥರಾಗಿರುತ್ತಾರೆ. ಈ ತಪ್ಪು ಮಾಡಿದವರಿಗೆ ಕಾಯ್ದೆ ಪ್ರಕಾರ 1 ವರ್ಷಕ್ಕೆ ಕಡಿಮೆಯಿಲ್ಲದ ಕಠಿಣ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ. ವರೆಗೆ ವಿಸ್ತರಿಸಬಹುದಾದ ಜುಲ್ಮಾನೆ ವಿಧಿಸಬಹುದು. ಇಲ್ಲದಿದ್ದರೆ ಇವೆರಡರಿಂದಲೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಕಾಯ್ದೆಯಡಿ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ತನ್ನ ಅಧಿಕಾರ ವ್ಯಾಪ್ತಿಯಡಿ ಬಾಲ್ಯ ವಿವಾಹ ಜರುಗುತ್ತಿರುವ ಮಾಹಿತಿ ಬಂದಾಗ ಸ್ವಪ್ರೇರಿತವಾಗಿ ದೂರು ದಾಖಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ.