ಬೀದರ್ | ಪ್ರಮೋದ್ ಮುತಾಲಿಕ್, ಮಾಧವಿ ಲತಾ ಸೇರಿ ಮೂವರಿಗೆ ಜಿಲ್ಲಾ ಪ್ರವೇಶ ನಿರ್ಬಂಧ
ಬೀದರ್ : ನಗರದ ಸಾಯಿ ಶಾಲೆ ಮೈದಾನದಲ್ಲಿ ನಡೆಯುತ್ತಿದ್ದ ಹಿಂದೂ ಜಾಗೃತಿ ಕಾರ್ಯಕ್ರಮಕ್ಕೆ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಬಿಜೆಪಿ ನಾಯಕಿ ಮಾಧವಿ ಲತಾ ಹಾಗೂ ಕಾಜಲ್ ಹಿಂದೂಸ್ತಾನಿ ಅವರನ್ನು ಬೀದರ್ ಜಿಲ್ಲೆಯನ್ನು ಪ್ರವೇಶಿಸುವುದನ್ನು ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ವಕ್ಫ್ ಬೋರ್ಡ್ ರದ್ದು ಸೇರಿದಂತೆ ಹಲವಾರು ಬೇಡಿಕೆಗಳನ್ನಿಟ್ಟು ಡಿ.7ರ ರಾತ್ರಿಯಿಂದ ಡಿ.9ರ ಬೆಳಿಗ್ಗೆ ವರೆಗೆ ನಗರದಲ್ಲಿ ಹಿಂದೂ ಬೃಹತ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರವಿವಾರದ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್, ಮಾಧವಿ ಲತಾ ಹಾಗೂ ಕಾಜಲ್ ಹಿಂದೂಸ್ತಾನಿ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದರು. ಆದರೆ, ಈ ಮೂವರನ್ನು ಡಿ.7ರ ರಾತ್ರಿ 12 ಗಂಟೆಯಿಂದ ಡಿ.9ರ ಬೆಳಿಗ್ಗೆ 6 ಗಂಟೆವರೆಗೆ ಬೀದರ್ ಜಿಲ್ಲೆ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಪ್ರಮೋದ್ ಮುತಾಲಿಕ್ ಅವರು ದ್ವೇಷ/ಪ್ರಚೋದನಾಕಾರಿ ಭಾಷಣ ಮಾಡಿದ್ದರಿಂದ ಅವರ ವಿರುದ್ಧ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಟ್ಟು 35 ಪ್ರಕರಣ ದಾಖಲಾಗಿವೆ. ಹಾಗೆಯೇ ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಅವರಿಗೆ ಉಡುಪಿ, ಮಂಡ್ಯ ಮತ್ತು ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರವೇಶ ನಿರಾಕರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಕಾಜಲ್ ಹಿಂದೂಸ್ತಾನಿ ಕೂಡ ಗುಜರಾತಿನ ವುನಾದಲ್ಲಿ ದ್ವೇಷ ಭಾಷಣ ಮಾಡಿದ್ದರು. ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಾಧವಿ ಲತಾ ಅವರು ಹೈದರಾಬಾದ್‌ನಲ್ಲಿ ಮಸೀದಿ ಕಡೆಗೆ ಬಾಣ ಬಿಡುವ ರೀತಿಯಲ್ಲಿ ಪೋಸ್ಟರ್ ಹಾಕಿದ್ದರಿಂದ ಅಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಇದಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಹಾಗಾಗಿ ಮುತಾಲೀಕ್, ಕಾಜಲ್ ಹಿಂದೂಸ್ತಾನಿ ಮತ್ತು ಮಾಧವಿ ಲತಾ ಈ ಮೂವರು ಒಂದು ನಿರ್ದಿಷ್ಟ ಕೋಮಿಗೆ ಗುರಿ ಮಾಡಿಕೊಂಡು ಮಾತನಾಡುವ ಪ್ರವೃತ್ತಿ ಹೊಂದಿದ್ದರಿಂದ ಅವರನ್ನು ಬೀದರ್ ಜಿಲ್ಲೆಗೆ ಪ್ರವೇಶ ಮಾಡದಂತೆ ತಡೆ ಹಿಡಿಯಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.