ಬಸವಣ್ಣನವರನ್ನು ʼಸಾಂಸ್ಕೃತಿಕ ನಾಯಕʼ ಎಂದು ಘೋಷಿಸಿದ ಸಿಎಂ ಸಿದ್ದರಾಮಯ್ಯಗೆ 160ಕ್ಕೂ ಹೆಚ್ಚು ಶರಣ ಸ್ವಾಮೀಜಿಗಳಿಂದ ಸನ್ಮಾನ

Update: 2024-03-07 11:55 GMT

Photo: X/@siddaramaiah

ಬಸವ ಕಲ್ಯಾಣ: ಸಮಸ್ತ ಕನ್ನಡಿಗರು, ಸಮಸ್ತ ಭಾರತೀಯರ ಅಭಿಮಾನದ ಸಂಕೇತವಾಗಿ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಬಸವಣ್ಣನವರನ್ನು ʼಕರ್ನಾಟಕದ ಸಾಂಸ್ಕೃತಿಕ ನಾಯಕʼ ಎಂದು ಘೋಷಿಸಿದ ಚಾರಿತ್ರಿಕ ಸಂಗತಿಗಾಗಿ 160 ಮಂದಿ ಶರಣ ಸ್ವಾಮೀಜಿಗಳು, ಗುರುಗಳು ಹಾಗೂ ವೀರಶೈವ- ಲಿಂಗಾಯತ ಮಠಾಧೀಶ ಸಮುದಾಯದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜಾತಿ, ವರ್ಗ, ಅಸಮಾನತೆ ಇಲ್ಲದ ಮನುಷ್ಯತ್ವದ ಸಮಾಜ ನಿರ್ಮಾಣ ಬಸವಣ್ಣರ ಗುರಿಯಾಗಿತ್ತು. ಹೀಗಾಗಿ ಬುದ್ದ, ಬಸವ, ಅಂಬೇಡ್ಕರ್ ನನಗೆ ಮಾರ್ಗದರ್ಶಕರು. ಇವರ ವಿಚಾರಗಳು ಇಂದು, ನಾಳೆ ಮಾತ್ರವಲ್ಲ ಯಾವತ್ತೂ ಶಾಶ್ವತ ಎಂದರು.

ಇಡೀ ಜಗತ್ತಿಗೆ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವವನ್ನು ಪರಿಚಯಿಸಿದ್ದು ಬಸವಾದಿ ಶರಣರು. ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಇರುವ ಮೌಲ್ಯಗಳಲ್ಲೆವೂ ಬಸವಾದಿ ಶರಣರ ಆಶಯಗಳಲ್ಲಿವೆ ಎಂದು ವಿವರಿಸಿದರು.

ಕಾಯಕ, ಉತ್ಪಾದನೆ, ದಾಸೋಹ ಬಸವಾದಿ ಶರಣರ ಆಶಯ. ಈ ಮೂಲಕ ಸಮಬಾಳು, ಸಮಪಾಲು ಎನ್ನುವುದನ್ನು 12ನೇ ಶತಮಾನದಲ್ಲೇ ಸಾರಿದ್ದಾರೆ. ಬಸವಣ್ಣ ಈ ಮಣ್ಣಿನ ಸಾಂಸ್ಕೃತಿಕ ಸ್ಫೂರ್ತಿ ಆಗಿರುವುದರಿಂದ ಸರಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಬಸವಣ್ಣರ ಭಾವಚಿತ್ರ ಕಡ್ಡಾಯಗೊಳಿಸಿದೆ. ಲಕ್ಷಾಂತರ ಕನ್ನಡಿಗರ ಸಾಕ್ಷಿಯಾಗಿ ನಾನು ಬಸವ ಜಯಂತಿಯಂದೇ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ ಎಂದರು.

ಬಸವಾದಿ ಶರಣರ ತತ್ವಗಳಿಗೆ ವಿರುದ್ಧವಾಗಿ ಇವತ್ತಿನ ವಿದ್ಯಾವಂತರು ಕಂದಾಚಾರಗಳನ್ನು ಆಚರಿಸುತ್ತಿದ್ದಾರೆ. ಆತ್ಮಸಾಕ್ಷಿ ವಿರುದ್ಧವಾಗಿ ನಡೆದುಕೊಳ್ಳಬಾರದು ಎನ್ನುವುದು ವಚನಗಳ ಆಶಯ. ಎಲವೋ ಎಂದರೆ ನರಕ. ಅಯ್ಯಾ ಎಂದರೆ ಸ್ವರ್ಗ ಎಂದು ಶರಣರು ಹೇಳಿದ್ದಾರೆ. ದಯೆಯೇ ಇಲ್ಲದ ಧರ್ಮ ಯಾವುದಯ್ಯ ಎನ್ನುವ ಮೂಲಕ ನಿಜವಾದ ಧರ್ಮ ಎಂದರೆ ಏನು ಎನ್ನುವುದನ್ನು ತಿಳಿಸಿದ್ದಾರೆ.

ಶರಣರು ಸಂಸ್ಕೃತವನ್ನು ಸಾರಾಸಗಟಾಗಿ ತಿರಸ್ಕರಿಸಿ ಮೊದಲ ಬಾರಿಗೆ ಜನರ ಭಾಷೆಯಲ್ಲಿ, ಜನರಾಡುವ ಭಾಷೆಯಲ್ಲಿ ಧರ್ಮದ ಮೌಲ್ಯಗಳನ್ನು ಸಾರಿದರು. ದಯೆಯೇ ಧರ್ಮದ ಮೂಲ ಎನ್ನುವ ಮಾತು ಎಷ್ಟು ಸರಳವಾಗಿದೆ. ಇದೇ ಜನರ ಭಾಷೆ ಎಂದರು.

ಬಸವಾದಿ ಶರಣರು ನುಡಿದಂತೆ ನಡೆದರು. ನಡೆದಂತೆ ನುಡಿದರು. ಇದೇ ನಮ್ಮ ಸರಕಾರಕ್ಕೆ ಮಾದರಿ. ನಾವು ಚುನಾವಣೆ ವೇಳೆಯಲ್ಲಿ ಕೊಟ್ಟ ಆಶ್ವಾಸನೆಗಳನ್ನು ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಈಡೇರಿಸಿ, ನಿಮ್ಮ ಮತಕ್ಕೆ ಗೌರವ ನೀಡಿ ಮತ್ತೆ ನಿಮ್ಮ ಮುಂದೆ ಬಂದು ನಿಂತಿದ್ದೇವೆ ಎಂದರು.

ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ - ಬಸವಕಲ್ಯಾಣ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಮುಖ್ಯಮಂತ್ರಿಗಳನ್ನು ಸನ್ಮಾನಿಸಲಾಯಿತು.

ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ , ಬಸವಜಯಮೃತ್ಯುಂಜಯ ಸ್ವಾಮೀಜಿ,ಮಾತೆ ಗಂಗಾದೇವಿ, ಸಿದ್ದರಾಮೇಶ್ವರ ಸ್ವಾಮೀಜಿ, ಷ.ಬ್ರ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿ 160 ಮಂದಿ ಶರಣ ಗುರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News