ಬಿಕರ್ನಕಟ್ಟೆ: ಜ.14-15ರಂದು ಬಾಲ ಯೇಸುವಿನ ವಾರ್ಷಿಕ ಮಹೋತ್ಸವ

Update: 2024-01-02 09:37 GMT

ಮಂಗಳೂರು, ಜ.2: ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜ. 14 ಮತ್ತು 15ರಂದು ನಡೆಯಲಿದೆ ಎಂದು ಕ್ಷೇತ್ರದ ಬಾಲಯೇಸುವಿನ ಪುಣ್ಯಕ್ಷೇತ್ರದ ನಿರ್ದೇಶಕ ವಂ. ಸ್ಪೀಫನ್ ಪಿರೇರಾ ತಿಳಿಸಿದರು.

ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜ. 14ರಂದು ಸಂಜೆ 6ಕ್ಕೆ ಮಹೋತ್ಸವದ ಬಲಿಪೂಜೆಯನ್ನು ಜೈಪುರ ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷ ಅ.ವಂ. ಒಸ್ವಾಲ್ಡ್ ಜೋಸೆಫ್ ಲೂವಿಸ್ ನೆರವೇರಿಸುವರು. ಅದೇ ದಿನ ಬೆಳಿಗ್ಗೆ 10.30ಕ್ಕೆ ಸಂತ ಲಾರೆನ್ಸ್ ಮೈನರ್ ಬಾಸಿಲಿಕಾ, ಅತ್ತೂರು-ಕಾರ್ಕಳ ಇದರ ರೆಕ್ಟರ್ ವಂ. ಆಲ್ಬನ್ ಡಿಸೋಜಾ ಬಲಿಪೂಜೆ ನೆರವೇರಿಸುವರು. ಜ. 15ರಂದು ಬೆಳಿಗ್ಗೆ 10.30ಕ್ಕೆ ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ. ಫ್ರಾನ್ಸಿಸ್ ಸೆರಾವೊ ಬಲಿಪೂಜೆಯನ್ನು ನೆರವೇರಿಸಲಿರುವರು. ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿಯು ಸಂಜೆ 6ಕ್ಕೆ ಕಾರ್ಮೆಲ್ ಸಭೆಯ ಸಹಾಯಕ ಪ್ರಾಂತ್ಯಾಧಿಕಾರಿ ಅ.ವಂ. ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ನೆರವೇರಿಸಲಿರುವರು.

ಜ. 14ರಂದು ಬೆಳಗ್ಗೆ 6ಕ್ಕೆ ಕೊಂಕಣಿ, 7.30ಕ್ಕೆ ಇಂಗ್ಲಿಷ್, 9ಕ್ಕೆ ಕೊಂಕಣಿ, ಮಧ್ಯಾಹ್ನ 1ಕ್ಕೆ ಕನ್ನಡದಲ್ಲಿ ಬಲಿಪೂಜೆ ನಡೆಯಲಿದೆ. ಜ. 15ರಂದು ಬೆಳಗ್ಗ್ಗೆ 6.30, 7.30, 9ಕ್ಕೆ ಕೊಂಕಣಿಯಲ್ಲಿ ಹಾಗೂ 10.30ಕ್ಕೆ ಮಕ್ಕಳಿಗಾಗಿ ವಿಶೇಷ ಪೂಜೆ ಹಾಗೂ 1ಕ್ಕೆ ಮಲಯಾಳಂ ಭಾಷೆಯಲ್ಲಿ ಪೂಜೆ ನಡೆಯಲಿದೆ. ಎರಡು ದಿನಗಳ ಮಹೋತ್ಸವಕ್ಕಾಗಿ ನೊವೇನಾ ಪ್ರಾರ್ಥನೆ ಜ. 5ರಿಂದ ಜ. 13ರವರೆಗೆ ನಡೆಯಲಿದೆ ಎಂದು ಅವರು ವಿವರ ನೀಡಿದರು.

ಮಹೋತ್ಸವದ ಅಂಗವಾಗಿ ಜ. 4ರಂದು ಸಂಜೆ 4.30ಕ್ಕೆ ಕುಲಶೇಖರದ ಹೋಲಿಕ್ರಾಸ್ ಚರ್ಚ್‌ನಿಂದ ಹೊರೆಕಾಣಿಕೆ ಆರಂಭಗೊಳ್ಳಲಿದೆ. ನೊವೇನಾ ಹಾಗೂ ಹಬ್ಬದ ದಿನಗಳಲ್ಲಿ ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ. ಜ. 11 ಮತ್ತು 12ರಂದು ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಗೋಷ್ಟಿಯಲ್ಲಿ ಬಾಲಯೇಸುವಿನ ಪುಣ್ಯ ಕ್ಷೇತ್ರದ ಮುಖ್ಯ ಧರ್ಮಗುರು ವಂ. ಮೆಲ್ವಿನ್ ಡಿಕುನ್ನಾ, ಕಾರ್ಮೆಲ್ ಸಭೆಯ ಪ್ರಾಂತೀಯ ಪ್ರತಿನಿಧಿ ದೀಪ್ ಫೆರ್ನಾಂಡಿಸ್ ಮತ್ತು ವಂ. ರುಡಾಲ್ಫ್ ಡಿಸೋಜಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News