ಸೆಮೀಸ್ ಗೆದ್ದ ಆಸೀಸ್
ಕೋಲ್ಕತಾ: ಇಲ್ಲಿನ ಈಡೆನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ.
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಸೆಮಿಫೈನಲ್ ಕದನದಲ್ಲಿ ಹರಿಣಗಳನ್ನು ಮಣಿಸಿದ ಆಸೀಸ್ ತಂಡ ನ.19 ರಂದು ಭಾರತದ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ. ಆ ಮೂಲಕ 7 ಬಾರಿ ಏಕದಿನ ವಿಶ್ವಕಪ್ ಫೈನಲ್ ಪ್ರವೇಶ ಪೆಡೆದ ದಾಖಲೆ ಬರೆದಿದೆ. ಇದರಲ್ಲಿ 5 ಬಾರಿ ಆಸ್ಟ್ರೇಲಿಯ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ದಕ್ಷಿಣ ಆಫ್ರಿಕಾ ನೀಡಿದ್ದ ಅಲ್ಪಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ತಂಡ 6 ವಿಕೆಟ್ ಕಳೆದುಕೊಂಡು ತೀವ್ರ ಹೊರಾಟ ನಡೆಸಿ ಗೆಲುವು ಸಾಧಿಸಿತು. ಆಸ್ಟ್ರೇಲಿಯ ಪರ ಓಪನರ್ ಟ್ರಾವಿಸ್ ಹೆಡ್ 9 ಬೌಂಡರಿ 2 ಸಿಕ್ಸರ್ ಸಹಿತ 62 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು. ಡೇವಿಡ್ ವಾರ್ನರ್ 29 ರನ್ ಗಳಿಸಿ ಮಾರ್ಕ್ರಮ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಬಾಂಗ್ಲಾ ವಿರುದ್ದ ಕಳೆದ ಪಂದ್ಯದಲ್ಲಿ 177 ರನ್ ಸ್ಟೋಟಕ ಶತಕ ಸಿಡಿಸಿದ್ದ ಮಿಚೆಲ್ ಮಾರ್ಷ್ ಶೂನ್ಯಕ್ಕೆ ರಬಾಡಗೆ ವಿಕೆಟ್ ಒಪ್ಪಿಸಿದರು. ಅನುಭವಿ ಸ್ಟೀವನ್ ಸ್ಮಿತ್ 30 ರನ್ ಗಳಿಸಿದರೆ, ಸ್ಟೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್ ವೆಲ್ 1 ರನ್ ಗೆ ಶಂಸಿ ಸ್ಪಿನ್ ಬಲೆ ಗೆ ಬೌಲ್ಡ್ ಆದರು. ಜೋಸ್ ಇಲ್ಲಿಂಗ್ಸ್ 28 ರನ್ ಪೇರಿಸಿದರು. ಕಡೆ ಗಳಿಗೆಯಲ್ಲಿ ಬ್ಯಾಟ್ ಬೀಸಿದ ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮ್ಮಿನ್ಸ್ ಕ್ರಮವಾಗಿ 16 , 14 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿದರು.
ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಹಾಗೂ ಶಂಸಿ ತಲಾ 2 ವಿಕೆಟ್ ಪಡೆದುಕೊಂಡರು. ರಬಾಡ ,ಐಡಮ್ ಮಾರ್ಕ್ರಮ್ ಹಾಗೂ ಕೇಶವ್ ಮಹಾರಾಜ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.