ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತ ಗಳಿಸಿದ ದಕ್ಷಿಣ ಆಫ್ರಿಕಾ

Update: 2023-10-07 13:04 GMT

ಹೊಸದಿಲ್ಲಿ : ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ಪೇರಿಸಿದೆ. ತಂಡದ ಪರವಾಗಿ ಮೂರು ಶತಕ ದಾಖಲಿಸುವುದರೊಂದಿಗೆ 428 ರನ್ ಗಳಿಸಿದೆ.

ಸ್ಪೋಟಕ ಬ್ಯಾಟಿಂಗ್ ಲಯಕ್ಕೆ ಮರಳಿದ ದಕ್ಷಿಣ ಆಫ್ರಿಕಾ ಶ್ರೀಲಂಕಾ ಬೌಲರ್ ಗಳ ಬೆವರಿಳಿಸಿತು. ಟಾಸ್ ಗೆದ್ದ ಶ್ರೀಲಂಕಾ ತಂಡ ಬೌಲಿಂಗ್ ಆಯ್ದುಕೊಂಡಿತ್ತು. ಬ್ಯಾಟಿಂಗ್ ಗೆ ಕ್ರೀಸಿಗೆ ಇಳಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಲಂಕಾ ಯಶಸ್ವಿ ಆಯಿತು. ನಾಯಕ ತೆಂಬ ಬವುಮ ರನ್ನು ದಿಲ್ಸಾನ್ ಮದುಶಂಕ ಎಲ್ ಬಿಡಬ್ಲ್ಯೂ ಗೆ ಕೆಡವಿದರು. ನಂತರ ಜೊತೆಯಾದ ಕ್ವಿಂಟನ್ ಡಿಕಾಕ್ ಮತ್ತು ರಾಸ್ಸಿ ವ್ಯಾನ್ ಡರ್ ಡಸ್ಸೆನ್ ಲಂಕಾ ಬೌಲರ್ ಗಳನ್ನು ದಂಡಿಸಿ ದ್ವಿಶಕದ ಜೊತೆಯಾಟ ದಲ್ಲಿ ಇಬ್ಬರೂ ಶತಕ ಸಿಡಿಸಿದರು. ಡಿಕಾಕ್ 84 ಬಾಲ್ ಗೆ 14 ಬೌಂಡರಿ 3 ಸಿಕ್ಸರ್ ಮೂಲಕ 100 ರನ್ ಗಳಿಸಿ ಪತಿರಣ ಗೆ ವಿಕೆಟ್ ಒಪ್ಪಿಸಿದರು.ವ್ಯಾನ್ ಡರ್ ಡಸ್ಸೆನ್ 12 ಬೌಂಡರಿ 2 ಸಿಕ್ಸರ್ ಸಹಿತ 108 ರನ್ ಗಳಿಸಿ ನಿರ್ಗಮಿಸಿದರು. ನಂತರ ಕ್ರೀಸಿಗೆ ಬಂದ ಐಡೆನ್ ಮಾರ್ಕ್ರಮ್ ಹಾಗೂ ಹೆನ್ರಿಕ್ ಕ್ಲಾಸನ್ ಸ್ಪೋಟಕ ಆಟವಾಡಿದರು. ಕ್ಲಾಸನ್ 32 ರನ್ ಗೆ ಕಸುನ್ ರಜಿತಾಗೆ ವಿಕೆಟ್ ಒಪ್ಪಿಸಿದರೆ, ಮಾರ್ಕ್ರಮ್ ಕ್ರೀಸ್ ಕಚ್ಚಿ ನಿಂತ ಪರಿಣಾಮ ಅವರ ಬ್ಯಾಟ್ ನಿಂದಲೂ ಶತಕ ಮೂಡಿ ಬಂತು. ಅವರಿಗೆ ಡೇವಿಡ್ ಮಿಲ್ಲರ್ ಸಾತ್ ನೀಡಿದರು. ಪರಿಣಾಮ ಒಂದೇ ಇನಿಂಗ್ಸ್ ನಲ್ಲಿ ತ್ರಿವಳಿ ಶತಕ ಸಹಿತ, ದಕ್ಷಿಣ ಆಫ್ರಿಕಾ ಬೃಹತ್ ಮೊತ್ತವನ್ನು ಪೇರಿಸಿತು.

ಶ್ರೀಲಂಕಾದ ಬೌಲರ್‌ ಮತೀಶಾ ಪತೀರಾಣ  10 ಓವರ್‌ ಗೆ 95 ರನ್‌ ನೀಡಿ, 1 ವಿಕೆಟ್‌ ಪಡೆದು ದುಬಾರಿಯಾದರು. ಒಂದು ಓವರ್‌ ಮೇಡನ್‌ ಮಾಡಿದ್ದರೂ ಕಾಸುನ್‌‌ ರಜಿತ 10 ಓವರ್‌ ಗೆ 90 ರನ್‌ ನೀಡಿ, 1 ವಿಕೆಟ್‌ ಪಡೆದರು. ಉಳಿದಂತೆ ದಿಲ ಶಾನ್‌ ಮದುಶಂಕ 2 ವಿಕೆಟ್‌, ದುನಿಲ್‌ ವೆಲ್ಲಾಲ 1 ವಿಕೆಟ್‌ ಪಡೆದರು. ಈಗ ಶ್ರೀಲಂಕಾ ಕ್ಕೆ ಪಂದ್ಯ ಗೆಲ್ಲಲು 429 ರನ್‌ ಗಳ ಅವಶ್ಯಕತೆಯಿದೆ. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News