ಇರಾನ್ ಅಧ್ಯಕ್ಷರಿದ್ದ ಹೆಲಿಕಾಪ್ಟರ್ ಪತನ | ಇಬ್ರಾಹೀಂ ರಯೀಸಿ ಬಗ್ಗೆ ಲಭ್ಯವಾಗದ ಮಾಹಿತಿ
ಟೆಹರಾನ್ : ಇರಾನ್ ಅಧ್ಯಕ್ಷ ಇಬ್ರಾಹೀಂ ರಯೀಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ರವಿವಾರ ಅಪಘಾತಕ್ಕೀಡಾಗಿದೆ ಎಂದು ಸರಕಾರಿ ಟಿವಿ ವಾಹಿನಿಯೊಂದು ವರದಿ ಮಾಡಿದೆ. ರಯೀಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಇರಾನಿನ ಪೂರ್ವ ಅಝರ್ಬೈಜಾನ್ ಪ್ರಾಂತದ ಜೋಲ್ಫಾ ಸಮೀಪ ಪತನಗೊಂಡಿದೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್ನಲ್ಲಿ ರಯೀಸಿ ಜೊತೆ ವಿದೇಶಾಂಗ ಸಚಿವ ಹೊಸೈನ್ ಆಮಿರ್ ಅಬ್ದೊಲ್ಲಾಹಿ ಹಾಗೂ ಇರಾನ್ ನ ಸರ್ವೋಚ್ಚ ನಾಯಕರ ಪ್ರತಿನಿಧಿಯಾದ ಅಯಾತೊಲ್ಲಾ ಅಲಿ ಅಲ್ ಹಾಶೆಂ ಕೂಡಾ ಇದ್ದರು ಎಂದು ವರದಿಗಳು ತಿಳಿಸಿವೆ.
ರಯೀಸಿ ಅವರು ನೆರೆಯ ರಾಷ್ಟ್ರವಾದ ಅಝರ್ಬೈಜಾನ್ನಲ್ಲಿ ಆ ದೇಶದ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಜೊತೆ ಅಣೆಕಟ್ಟೊಂದನ್ನು ಉದ್ಘಾಟಿಸಿದ್ದರು. ಉಭಯ ರಾಷ್ಟ್ರಗಳು ಅರಾಸ್ ನದಿಗೆ ನಿರ್ಮಿಸಿದ ಮೂರನೇ ಅಣೆಕಟ್ಟು ಇದಾಗಿದೆ.
ರಯೀಸಿ ಅವರಿದ್ದ ಹೆಲಿಕಾಪ್ಟರ್ನೊಂದಿಗೆ ಪ್ರಯಾಣಿಸಿದ್ದ ಇತರ ಎರಡು ಬೆಂಗಾವಲು ಹೆಲಿಕಾಪ್ಟರ್ಗಳು ಸುರಕ್ಷಿತವಾಗಿ ಹಿಂತಿರುಗಿವೆ ಎಂದು ವರದಿಗಳು ತಿಳಿಸಿವೆ. ಬೆಂಗಾವಲು ಹೆಲಿಕಾಪ್ಟರ್ಗಳಲ್ಲಿ ಇಂಧನ ಸಚಿವ ಅಲಿ ಅಕ್ಬರ್ ಮೆಹ್ರಾಬಿಯಾನ್ ಹಾಗೂ ವಸತಿ ಹಾಗೂ ಸಾರಿಗೆ ಸಚಿವ ಮೆಹ್ರದಾದ್ ಬಾಝ್ಪ್ರಾಶ್ ಇದ್ದು, ಅವರು ಸುರಕ್ಷಿತವಾಗಿ ಮರಳಿದ್ದಾರೆ.ಆದರೆ ಅಧ್ಯಕ್ಷ ರಯೀಸಿ ಅವರಿದ್ದ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ವರದಿಗಳು ತಿಳಿಸಿವೆ.
ರಯೀಸಿ ಅವರಿದ್ದ ಹೆಲಿಕಾಪ್ಟರ್ನೊಳಗೆ ಇದ್ದವರು ತುರ್ತು ಕರೆ ಮಾಡಿದ್ದು, ಇದರಿಂದಾಗಿ ಈ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿರಲಾರದೆಂಬ ಆಶಾವಾದ ಉಂಟಾಗಿದೆ.
ಅಪಘಾತ ನಡೆದ ಸ್ಥಳವನ್ನು ತಲುಪಲು ವಿವಿಧ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ತಂಡಗಳು ಯತ್ನಿಸುತ್ತಿವೆ. ಆದರೆ ಮಂಜು ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಅಲ್ಲಿಗೆ ತಲುಪಲು ಕೆಲವು ತಾಸುಗಳೇ ಬೇಕಾದೀತು ಎಂದು ಆಂತರಿಕ ಸಚಿವ ಅಹ್ಮದ್ವಾಹಿದಿ ತಿಳಿಸಿದ್ದಾರೆ.
ಅಪಘಾತಕ್ಕೀಡಾದ ಹೆಲಿಕಾಪ್ಟರ್ ಜೊತೆ ರೇಡಿಯೋ ಸಂಪರ್ಕ ಸಾಧ್ಯವಾಗಿದೆಯೆಂದು ಅವರು ದೃಢಪಡಿಸಿದ್ದರಾದರೂ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು. ಇರಾನ್ ಅಧ್ಯಕ್ಷರಿದ್ದ ಹೆಲಿಕಾಪ್ಟರ್ , ಅಝರ್ಬೈಝಾನ್ ದೇಶದ ಗಡಿಯಲ್ಲಿರುವ ಅರಣ್ಯ ಹಾಗೂ ಪರ್ವತಗಳಿಂದ ಆವೃತವಾದ ರೆಲ್ಪಾ ಪ್ರಾಂತದ ಡಿಝ್ಮಾರ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ತಿಳಿದು ಬಂದಿದೆ.
ಇರಾನ್ ವೈವಿಧ್ಯಮಯ ಹೆಲಿಕಾಪ್ಟರ್ಗಳನ್ನು ನಿರ್ವಹಿಸುತ್ತಿದೆ. ಆದರೆ ದಶಕಗಳಿಂದ ಅದು ಎದುರಿಸುತ್ತಿರುವ ನಿರ್ಬಂಧಗಳಿಂದಾಗಿ, ನೂತನ ವೈಮಾನಿಕ ವಾಹನಗಳನ್ನು ಅಥವಾ ಬಿಡಿಭಾಗಗಳನ್ನು ಖರೀದಿಸುವುದು ಕಷ್ಟಕರವಾಗಿದೆ. ಇರಾನ್ನಲ್ಲಿ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಹಲವಾರು ಸೇನಾ ವಿಮಾನಗಳು 1979ರ ಇರಾನ್ ಕ್ರಾಂತಿಗೂ ಹಿಂದಿನವು ಎನ್ನಲಾಗಿದೆ.
63 ವರ್ಷ ವಯಸ್ಸಿನ ರಯೀಸಿ ಇಸ್ರೇಲ್ ಹಾಗೂ ಅಮೆರಿಕದ ಕಡು ವಿರೋಧಿಯಾಗಿದ್ದಾರೆ. ಕಳೆದ ವರ್ಷ ಇರಾನ್ನಲ್ಲಿ ಪೊಲೀಸ್ ದೌರ್ಜನ್ಯದಿಂದಾಗಿ ಮೆಹಸಾ ಅಮಿನಿ ಎಂಬ ಯುವತಿ ಸಾವನ್ನಪ್ಪಿದ ಘಟನೆಯ ಹಿನ್ನೆಲೆಯಲ್ಲಿ ಭುಗಿಲೆದ್ದ ನಾಗರಿಕ ಪ್ರತಿಭಟನೆಯನ್ನು ರಯೀಸಿ ನಿರ್ದಯವಾಗಿ ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.