ಪಾಕಿಸ್ತಾನ: ರೈಲನ್ನು ಅಪಹರಿಸಿದ ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು

ಲಾಹೋರ್: ಪಾಕಿಸ್ತಾನದಿಂದ ಬಲೂಚಿಸ್ತಾನವನ್ನು ಪ್ರತ್ಯೇಕಿಸಬೇಕೆಂದು ಹೋರಾಟ ನಡೆಸುತ್ತಿರುವ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಯು ಪಾಕಿಸ್ತಾನದ ರೈಲನ್ನು ಅಪಹರಿಸಿದ್ದು, ಕನಿಷ್ಠ 120 ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಘಟನೆಯಲ್ಲಿ ಆರು ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಬಿಎಲ್ಎ ತಿಳಿಸಿದೆ.
ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ಹೋಗುತ್ತಿದ್ದ ಜಾಫರ್ ಎಕ್ಸ್ಪ್ರೆಸ್ ರೈಲಿನ ಮೇಲೆ ಪ್ರತ್ಯೇಕತಾವಾದಿಗಳು ದಾಳಿ ನಡೆಸಿದ್ದು, ಒಂಬತ್ತು ಬೋಗಿಗಳಿರುವ ಈ ರೈಲಿನಲ್ಲಿ 400 ಕ್ಕೂ ಹೆಚ್ಚು ಪ್ರಯಾಣಿಕರು ಪಯಣಿಸುತ್ತಿದ್ದರು ಎಂದು ಪಾಕ್ ರೈಲ್ವೆ ಅಧಿಕಾರಿಗಳು ಸುದ್ದಿ ಸಂಸ್ಥೆ ರಾಯಿಟರ್ಸ್ಗೆ ತಿಳಿಸಿದ್ದಾರೆ.
ಪಾಕಿಸ್ತಾನಿ ಪಡೆಗಳು ಕಾರ್ಯಾಚರಣೆ ಆರಂಭಿಸಿದರೆ ಒತ್ತೆಯಾಳುಗಳನ್ನು ಕೊಲ್ಲಲಾಗುವುದು ಎಂದು ಬಿಎಲ್ಎ ಬೆದರಿಸಿದೆ. ರೈಲ್ವೆ ಹಳಿಗಳನ್ನು ಸ್ಫೋಟಿಸಿದ ಉಗ್ರರು ರೈಲನ್ನು ನಿಲ್ಲಿಸಿ, ರೈಲಿನ ಒಳ ಪ್ರವೇಶಿಸಿದರು ಎಂದು ವರದಿಯಾಗಿದೆ.
"ಯಾವುದೇ ಮಿಲಿಟರಿ ಅತಿಕ್ರಮಣಕ್ಕೆ ಸಮಾನವಾದ ಪ್ರತಿಕ್ರಿಯೆ ನೀಡಲಾಗುವುದು. ಇಲ್ಲಿಯವರೆಗೆ, ಆರು ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ನೂರಾರು ಪ್ರಯಾಣಿಕರು BLA ವಶದಲ್ಲಿದ್ದಾರೆ. ಈ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿಯನ್ನು ಬಲೂಚ್ ಲಿಬರೇಶನ್ ಆರ್ಮಿ ವಹಿಸಿಕೊಂಡಿದೆ" ಎಂದು BLA ವಕ್ತಾರರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಲೂಚಿಸ್ತಾನದ ಬೋಲಾನ್ ಜಿಲ್ಲೆಯ ಮುಷ್ಕಾಫ್ ಪ್ರದೇಶದಲ್ಲಿ ಘಟನೆ ನಡೆದ ಸ್ಥಳಕ್ಕೆ ಭದ್ರತಾ ಪಡೆಗಳು ತಲುಪಿವೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಲೂಚಿಸ್ತಾನ ಸರ್ಕಾರ ತುರ್ತು ಕ್ರಮಗಳನ್ನು ವಿಧಿಸಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ಸಂಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಸರ್ಕಾರಿ ವಕ್ತಾರ ಶಾಹಿದ್ ರಿಂಡ್ ಹೇಳಿದರು.
ಬಲೂಚಿಸ್ತಾನ ಪ್ರಾಂತ್ಯವು ಹೇರಳವಾದ ಅನಿಲ ಮತ್ತು ಖನಿಜ ಸಂಪನ್ಮೂಲಗಳನ್ನು ಹೊಂದಿದ್ದು, ಇದನ್ನು ಪಾಕಿಸ್ತಾನ ಸರ್ಕಾರ ಅನ್ಯಾಯವಾಗಿ ಬಳಸಿಕೊಳ್ಳುತ್ತಿದೆ ಎಂದು ಹಲವಾರು ಪ್ರತ್ಯೇಕತಾ ಪಡೆಗಳು ಹೋರಾಟ ನಡೆಸುತ್ತಿವೆ. ಇಂತಹ ದಂಗೆಕೋರ ಗುಂಪುಗಳಲ್ಲಿ BLA ಕೂಡಾ ಒಂದು. ಬಲೂಚಿಸ್ತಾನ್ ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದು, ದೇಶದ ಒಟ್ಟು ಭೂಪ್ರದೇಶದ ಸುಮಾರು 44 ಪ್ರತಿಶತವನ್ನು ಒಳಗೊಂಡಿದೆ. ಇದು ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರಾಂತ್ಯವಾಗಿದೆ. ಈ ಪ್ರಾಂತ್ಯವು ಗ್ವಾದರ್ನಲ್ಲಿರುವ ವಿಶ್ವದ ಅತಿದೊಡ್ಡ ಆಳ ಸಮುದ್ರ ಬಂದರುಗಳಲ್ಲಿ ಒಂದಾಗಿದ್ದು, ಪ್ರಾದೇಶಿಕ ಮತ್ತು ಜಾಗತಿಕ ವ್ಯಾಪಾರ ಮಾರ್ಗಗಳಿಗೆ ಮಹತ್ವದ್ದಾಗಿದೆ.